Mon. Dec 23rd, 2024

ಡಾಂಬರೀಕರಣ ಸರಿಪಡಿಸಲು ಒತ್ತಾಯಿಸಿ ಗ್ರಾನೈಟ್ ಅಸೋಸಿಯೇಷನ್ ಪ್ರತಿಭಟನೆ

Share this with Friends

ಮೈಸೂರು: ಜಿಲ್ಲೆಯ ತಾಂಡವಪುರ ಕೈಗಾರಿಕಾ ಪ್ರದೇಶ ಚಿಕ್ಕಯ್ಯನ ಛತ್ರ ಅಡಕನಹಳ್ಳಿ ಮುಖ್ಯ ರಸ್ತೆಯಲ್ಲಿ ಡಾಂಬರೀಕರಣ ಸರಿಯಾಗಿಲ್ಲವೆಂದು ಆರೋಪಿಸಿ ಗ್ರಾನೈಟ್ ಅಸೋಸಿಯೇಷನ್ ಸಂಘದವರು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಕೈಗಾರಿಕಾ ಪ್ರದೇಶದ ಚಿಕ್ಕಯ್ಯನ ಛತ್ರ ಅಡಕನಹಳ್ಳಿ ಮುಖ್ಯ ರಸ್ತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಸರಿಯಾಗಿಲ್ಲ ಎಂದು
ಇಲ್ಲಿನ ಗ್ರಾನೆಟ್ ಅಸೋಸಿಯೇಷನ್ ಸಂಘದವರು ಆಕ್ರೋಶ ವ್ಯಕ್ತಪಡಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಕೆ ಎ ಐ ಡಿ ಬಿ ಅಧಿಕಾರಿಗಳು ಡಾಂಬರೀಕರಣ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಡಾಂಬರೀಕರಣ ಮಾಡುವ ಮುನ್ನ ರಸ್ತೆಯನ್ನು ಸ್ವಚ್ಛಗೊಳಿಸಿ ನಂತರ ರಸ್ತೆಯ ಮೇಲೆ ಆಯಿಲ್ ಹಾಕಿ ತದನಂತರ ಡಾಂಬರೀಕರಣ ಮಾಡಿದರೆ ರಸ್ತೆ ಕಾಮಗಾರಿ ಗಟ್ಟಿಯಾಗಿರುತ್ತದೆ ಎಂದು ಕೆಲಸ ಮಾಡುತ್ತಿದ್ದವರಿಗೆ ಸೂಚಿಸಿದರು.

ರಸ್ತೆ ಮಧ್ಯಭಾಗದಲ್ಲಿ ಧೂಳನ್ನು ಸ್ವಚ್ಛಗೊಳಿಸದೆ ಡಾಂಬರೀಕರಣ ಮಾಡಿದ ಡಾಂಬರನ್ನು ತೆಗೆದುಹಾಕಿ ಮತ್ತೆ ಹೊಸ ಡಾಂಬರನ್ನು ಹಾಕುವಂತೆ ಅಧಿಕಾರಿಗಳು ಆದೇಶಿಸಿದರು.

ಈ‌ ವೇಳೆ ಗ್ರಾನೈಟ್ ಅಸೋಸಿಯೇಷನ್ ಸಂಘದವರು ಸುದ್ದಿಗಾರೊಂದಿಗೆ ಮಾತನಾಡಿ, ಇಲ್ಲಿನ ಕೈಗಾರಿಕಾ ಪ್ರದೇಶದವರು ಒಂದು ಎಕರೆಗೆ 15 ರಿಂದ 30 ಸಾವಿರ ವರೆಗೆ ಕಂದಾಯವನ್ನು ಕಟ್ಟುತ್ತಾರೆ. ಆದರೆ ರಸ್ತೆ, ನೀರು, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ಕೈಗಾರಿಕಾ ಪ್ರದೇಶಗಳಲ್ಲಿ ಹೊರ ರಾಜ್ಯದವರೇ ಹೆಚ್ಚು ಕೆಲಸ ಮಾಡುತ್ತಿದ್ದು ಈ ರಸ್ತೆಯಲ್ಲಿ ಬೀದಿದೀಪ ಸರಿಯಾಗಿಲ್ಲದ ಕಾರಣ ರಾತ್ರಿ ವೇಳೆ ದರೋಡೆ, ಕೊಲೆಗಳು ನಡೆಯುತ್ತಿವೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾನೈಟ್ ಅಸೋಸಿಯೇಷನ್ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ನಟರಾಜು ಮತ್ತು ಕುಮಾರ್ ಹಾಗೂ ಗ್ರಾನೈಟ್ ಮಾಲೀಕರು ಆಗ್ರಹಿಸಿದರು.


Share this with Friends

Related Post