Mon. Dec 23rd, 2024

ಬಿಪಿಎಲ್ ಕಾರ್ಡ್ ವಾಪಸು ಮಾಡದಿದ್ದರೆ ತಾಲೂಕು ಕಚೇರಿಗಳಿಗೆ ಬೀಗ:ಅಶೋಕ್

Share this with Friends

ಬೆಂಗಳೂರು: ಸರ್ಕಾರ ಈಗ ರದ್ದು ಮಾಡಿರುವ ಬಿಪಿಎಲ್ ಕಾರ್ಡ್ ಗಳನ್ನು ವಾಪಸು ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲಾ ತಾಲೂಕು ಕಚೇರಿಗಳಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಸಿದರು

ಮಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ನಂಜಪ್ಪ ಬಡಾವಣೆ ಹಾಗೂ ಜೈ ಮಾರುತಿನಗರ ಬಡಾವಣೆಗಳಲ್ಲಿ ಪಡಿತರ ಚೀಟಿ ರದ್ದಾದ ಮನೆಗಳಿಗೆ ಶಾಸಕರುಗಳಾದ ಡಾ. ಅಶ್ವಥ್ ನಾರಾಯಣ್, ಕೆ. ಗೋಪಾಲಯ್ಯ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ನಂತರ ಮಾಧ್ಯಮಗಳೊಂದಿಗೆ ಅಶೋಕ್ ಮಾತನಾಡಿದರು.

50 ವರ್ಷ ಆಡಳಿತ ಮಾಡಿದಿರಿ ಬೋಗಸ್ ಕಾರ್ಡ್ ಗಳನ್ನು ಯಾರು ಕೊಟ್ಟರು ಎಂಬುದು ನಿಮಗೆ ಗೊತ್ತಿಲ್ಲವೇ ಮೊದಲು ಬೋಗಸ್ ಕಾರ್ಡ್ ಕೊಟ್ಟ ಅಧಿಕಾರಿಗಳ ವಿರುದ್ಧ ತಾಕತ್ತಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಕಿಡಿಕಾರಿದರು

ವಕ್ ಬೋರ್ಡ್ ಗೆ ಆದೇಶ ಕೊಟ್ಟ ರೀತಿಯಲ್ಲೇ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿರುವ ಬಗ್ಗೆಯೂ ಆದೇಶ ಹೊರಡಿಸಿ ಎಪಿಎಲ್ ಕಾರ್ಡ್ ಗಳನ್ನು ತಕ್ಷಣ ವಾಪಸ್ ಪಡೆದು ಬಡವರಿಗೆ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ವಾಪಸು ಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ವಾಪಸ್ ಪಡೆಯಿರಿ, ಯಾಕೆ ನಿಮಗೆ ದಮ್ ಇಲ್ಲವೆ, ನಿಮ್ಮ ಬಳಿ ಇರುವ ದಾಖಲೆ ಹುಡುಕಿ ಬಿಪಿಎಲ್ ಕಿತ್ತುಹಾಕಿ. ಅವರು ಹೋರಾಟ ಮಾಡುತ್ತಾರೆ ಎಂದು ಬಡವರ ಮೇಲೆ ದರ್ಪ ತೋರಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ಅಶ್ವತ್ ನಾರಾಯಣ ಮಾತನಾಡಿ,
ರಾಜ್ಯ ಸರ್ಕಾರ ತೆಗೆದುಕೊಂಡಿರುವುದು ಜನವಿರೋಧಿ ನಿರ್ಧಾರ ಎಂದು ದೂರಿದರು.

ಸರ್ಕಾರದ ಈ ನಡೆಯನ್ನು ನಾವು ಖಂಡಿಸುತ್ತೇವೆ. ಒಂದು ಕೋಟಿ ಕಾರ್ಡ್ ಗಳಿಗೆ ಕೇಂದ್ರ ಸರ್ಕಾರವೇ ಅನುಕೂಲ ಮಾಡಿಕೊಟ್ಟಿದೆ, ಕೇವಲ 25 ಲಕ್ಷ ಜನರಿಗೆ ಮಾತ್ರ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಡಬೇಕು ಈಗ ಅದನ್ನು ಕೈ ಬಿಟ್ಟು ಕೈ ತೊಳೆದುಕೊಳ್ಳಬೇಕೆಂದು ಈ ಕೆಟ್ಟ ಸರ್ಕಾರ ಹೊರಟಿದೆ ಎಂದು ದೂರಿದರು.

ಮಾಜಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಕೆ ಗೋಪಾಲಯ್ಯ ಮಾತನಾಡಿ, ನಾನೇ ಖುದ್ದಾಗಿ ನೂರಾರು ಕಾಡುಗಳನ್ನು ಚೆಕ್ ಮಾಡಿದ್ದೇನೆ ಅರ್ಹರ ಕಾರ್ಡುಗಳನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ನಾನು ಆಹಾರ ಸಚಿವನಾಗಿದ್ದಾಗ ಬಹಳಷ್ಟು ಜನರಿಗೆ ಒಳಿತು ಮಾಡಿದ್ದೆ ಪ್ರಧಾನಿ ನರೇಂದ್ರ ಮೋದಿಯವರು ನಾವು ಕೇಳಿದ ಅನುಕೂಲ ಕೊಟ್ಟರು,ಬರೀ ಆಧಾರ್ ಕಾರ್ಡ್ ಇರುವವರೆಗೂ ನಾವು ರೇಷನ್ ಕೊಟ್ಟೆವು. ಆದರೆ ಈ ಸರ್ಕಾರ ಬಿಪಿಎಲ್ ಕಾರ್ಡು ಗಳನ್ನು ರದ್ದು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


Share this with Friends

Related Post