ಬೆಂಗಳೂರು: ವಿಕ್ರಂ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ಪೊಲೀಸರ ಎನ್‌ಕೌಂಟರ್ ಮಾಡಿದ್ದಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ವಿಕ್ರಂ ಗೌಡನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಸೋಮವಾರ ಸಂಜೆ ವಿಕ್ರಂ ಗೌಡನ ಎನ್‌ಕೌಂಟರ್ ಮಾಡಲಾಗಿದೆ ಎಂದು ತಿಳಿಸಿದರು.
ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ.ಆಗ ಪೊಲೀಸರು ಪ್ರತಿದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ.ಈ ವೇಳೆ ವಿಕ್ರಂ ಜೊತೆಯಲ್ಲಿದ್ದ ಕೆಲವರು ಓಡಿ ಹೋಗಿದ್ದಾರೆ, ಆ ಭಾಗದಲ್ಲಿ ಕೂಂಬಿಂಗ್ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ವಿಕ್ರಂ ಗೌಡನ ಮೇಲೆ ತೀವ್ರ ನಿಗಾ ಇಟ್ಟಿದ್ದ ಪೊಲೀಸರು,ನಿನ್ನೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಮಾಡಿದ್ದಾರೆ ಎಂದು ಹೇಳಿದರು.
ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗೀತು ಅಂದುಕೊಂಡಿದ್ದೆವು. ಆದರೆ ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದಾರೆ. ಅವರಿಬ್ಬರೂ ತಪ್ಪಿಸಿಕೊಂಡು ಹೋಗಿದ್ದು ಕೂಂಬಿಂಗ್ ನಡೆಸಲಾಯಿತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದಂತೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿದೆ, ಆ ಸಂದರ್ಭದಲ್ಲಿ ಪೊಲೀಸರಿಗೆ ವಿಕ್ರಂ ಗೌಡನನ್ನು ಎನ್‌ಕೌಂಟರ್ ಮಾಡುವುದು ಅನಿವಾರ್ಯವಾಯಿತು ಎಂದು ಪರಮೇಶ್ವರ್ ತಿಳಿಸಿದರು.