Sun. Dec 22nd, 2024

ವಿಶೇಷಚೇತನ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿ:ಡಾ.ಪಿ.ಶಿವರಾಜು

Share this with Friends

ಮೈಸೂರು: ವಿಶೇಷಚೇತನ ಮಕ್ಕಳು ಸಾಮಾನ್ಯ ಮಕ್ಕಳಿಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ ಅವರ ಪ್ರತಿಭೆಯನ್ನು ಪ್ರೋತ್ಸಾಹಿ ಹೊರತರಲು ಅವರನ್ನು ಪೋಷಕರು ಹಾಗೂ ಶಿಕ್ಷಕರು ಸಹಾನುಭೂತಿಯಿಂದ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ತಿಳಿಹೇಳಿದರು.

ವಿವಿಧ ಇಲಾಖೆಗಳು ಸ್ವಯಂಸೇವಾ ಸಂಸ್ಥೆಗಳ, ಸಂಘಗಳ, ವೇದಿಕೆಗಳ, ಒಕ್ಕೂಟಗಳ ಸಹಯೋಗದೊಂದಿಗೆ ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಾದ್ಯಂತ ಎಲ್ಲಾ ದೇಶಗಳ ಎಲ್ಲಾ ಸ್ಥಳಗಳಲ್ಲಿಯೂ ವಿಶೇಷಚೇತನ ವ್ಯಕ್ತಿಗಳಿದ್ದಾರೆ. ಅಂತಹ ವ್ಯಕ್ತಿಗಳ ಪ್ರತಿಭೆ ಹಾಗೂ ಸಾಧನೆಗಳನ್ನು ಅನಾವರಣಗೊಳಿಸಲು ಮತ್ತು ಜನ ಸಾಮಾನ್ಯರಿಗೆ ತಿಳಿಸಲು ಆಚರಿಸುವಂತಹ ಸರ್ವಕಾಲಿಕ ಹಬ್ಬವೇ ವಿಶೇಷಚೇತನ ದಿನಾಚರಣೆ ಎಂದು ಹೇಳಿದರು.

ವಿಶೇಷ ಚೇತನರು ಮತ್ತು ಸಾಮಾನ್ಯರಿಗೆ ಬಹಳ ವ್ಯತ್ಯಾಸವಿರುವುದಿಲ್ಲ. ಅವರಿಗೆ ಅವಕಾಶಗಳು ಕಡಿಮೆ ಹಾಗಾಗಿ ನಾವು ಅವರಿಗೆ ಹೆಚ್ಚಿನ ಅವಕಾಶ, ಪ್ರೋತ್ಸಾಹವನ್ನು ನೀಡಿದರೆ ಅವರು ಸಮಾಜದ ಮುಖ್ಯವಾಹಿನಿಗೆ ಬಂದು ನಮ್ಮಂತೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ತಿಳಿಸಿದರು.

ಎಲ್ಲವೂ ಸರಿ ಇರುವ ವ್ಯಕ್ತಿಯು ಸಮಾಜಕ್ಕೆ ಯಾವುದೇ ಕೊಡುಗೆಯನ್ನು ನೀಡದೆ ಇದ್ದಲ್ಲಿ ಆತ ಒಬ್ಬ ವಿಕಲಚೇತನ ಆಗಿರುತ್ತಾನೆ. ಹೀಗಿದ್ದಾಗ ನಮ್ಮಲ್ಲಿರುವ ನ್ಯೂನ್ಯತೆಗಳ ಬಗ್ಗೆ ಯೋಚಿಸದೆ ಪ್ರತಿಯೊಬ್ಬರೂ ಆತ್ಮ ವಿಶ್ವಾಸದಿಂದ ಮುನ್ನುಗ್ಗಿದರೆ ಎಲ್ಲವೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮಲಿರುವ ಪ್ರತಿಭೆಯನ್ನು ಅರಿತುಕೊಂಡು ಯಾವುದಾದರೂ ಒಂದು ಒಳ್ಳೆ ಮಾರ್ಗದಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದು ಶಿವರಾಜ್ ಕರೆ ನೀಡಿದರು.

ಮಹಾರಾಣಿ ಕಾಲೇಜಿನ ಕನ್ನಡ ಸಹಾಯಕ ಪ್ರಧ್ಯಾಪಕರಾದ ಹಾಗೂ ಉಪನ್ಯಾಸಕರಾದ ನಾಗರಾಜು ಅವರು ಮಾತನಾಡಿ,
ಇಂದು ಸಮಾಜದಲ್ಲಿ ನಮಗೆ ಅವಕಾಶಗಳು ಹೇರಳವಾಗಿವೆ. ನಮಗಾಗಿ ಶ್ರಮಿಸುವ ಹಲವಾರು ಸಂಘ-ಸಂಸ್ಥೆಗಳಿವೆ, ನಮಗಾಗಿಯೇ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಹಾಗಾಗಿ ನಾವು ಸಮಾಜವನ್ನು ದೂಷಿಸದೆ ಅವುಗಳನ್ನು ಮೊದಲು ಅರಿತುಕೊಂಡು ನಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಬ್ರೈಲ್ ಮುದ್ರಣಲಯದ ವತಿಯಿಂದ ತಯಾರಿಸಲಾಗಿದ್ದ 2025 ನೇ ಸಾಲಿನ ಬ್ರೈಲ್ ಕ್ಯಾಲೆಂಡರ್ ಹಾಗೂ ಮಹಾರಾಣಿ ಕಾಲೇಜಿನ ಕನ್ನಡ ಸಹಾಯಕ ಪ್ರಧ್ಯಾಪಕರು ಹಾಗೂ ವಿಶೇಷಚೇತನರಾದ ನಾಗರಾಜು ಅವರು ರಚಿಸಿರುವ “ಗುರುವೇ ನಮನ” ಪುಸ್ತಕವನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ದೃಶ್ಯ ದೋಷವುಳ್ಳ ಮಕ್ಕಳ ಅಧಿಕ್ಷಕರಾದ ಸತೀಶ್, ಶ್ರವಣ ದೋಷವುಳ್ಳ ಮಕ್ಕಳ ಪಾಠಶಾಲೆಯ ಅಧಿಕ್ಷಕರಾದ ಉದಯ್ ಶಂಕರ್, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳೆ ಮತ್ತು ಮಕ್ಕಳ ಸಂರಕ್ಷಣಾ ಜಿಲ್ಲಾ ಅಧಿಕಾರಿಗಳಾದ ಉಷಾ, ಛಾಯಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರಘುನಾಥ್ ಗೌಡ, ಸ್ವಾಮಿ ವಿವೇಕನಂದ ಯೂತ್ಸ್ ಮೂವ್ಮೆಂಟ್ಸ್ ನ ನಿರ್ದೇಶಕರಾದ ರಮೇಶ್, ಶ್ರವಣ ದೂಷವುಳ್ಳ ಒಕ್ಕೂಟದ ಅಧ್ಯಕ್ಷ ಶ್ರೀಧರ, ಸಜ್ಜನ ಸಂಸ್ಥೆಯ ಕಾರ್ಯದರ್ಶಿ ಕುಮಾರ್, ಸರ್ಕಾರಿ ಪ್ರಯಾಗ್ ಮುದ್ರಣಾಲಯದ ವ್ಯವಸ್ಥಾಪಕ ಮೋಹನ್ ಜಿ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post