Fri. Mar 6th, 2026

ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ: ಉಭಯ ಸದನಗಳು ನಾಳೆಗೆ ಮುಂದೂಡಿಕೆ

Share this with Friends

ಬೆಳಗಾವಿ:ಹಿರಿಯ ರಾಜಕಾರಣಿ,ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ನಿಧನಕ್ಕೆ ವಿಧಾನಸಭೆ ಹಾಗು ವಿಧಾನ ಪರಿಷತ್ ನಲ್ಲಿ ಸಂತಾಪ ಸೂಚಿಸಲಾಯಿತು.ರಾಜಕೀಯ ಕ್ಷೇತ್ರ,ಸಾಮಾಜಿಕ,ಶೈಕ್ಷಣಿಕ,ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.  ನಂತರ ಮೃತರ ಗೌರವಾರ್ಥ ಒಂದು ನಿಮಿಷಗಳ ಕಾಲ ಮೌನ ಆಚರಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್ ನ ಉಭಯ ಸದನಗಳ ಕಲಾಪವನ್ನು ಮೊಟಕುಗೊಳಿಸಿ ನಾಳೆಗೆ ಮುಂದೂಡಲಾಯಿತು.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು.ಮೃತರ ಕೊಡುಗೆಯನ್ನು ಸ್ಮರಿಸಿದರು. ನಿರ್ಣಯ ಬೆಂಬಲಿಸಿ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಎಲ್ಲರ ಜೊತೆ ಸ್ನೇಹದಿಂದ ಇರುತ್ತಿದ್ದ ಶಾಮನೂರು ಶಿವಶಂಕರಪ್ಪನವರು ರಾಜಯಕೀಯದಲ್ಲಿ ಅಜಾತ ಶತ್ರು ಎನಿಸಿದ್ದರು. ಪ್ರತಿ ಬಾರಿ ನಾನು ದಾವಣಗೆರೆ ನಗರಕ್ಕೆ ಆಗಮಿಸಿದರೆ ಶಾಮನೂರು ಶಿವಶಂಕರಪ್ಪನವರ ಗೆಸ್ಟ್ ಹೌಸ್‍ನಲ್ಲಿ ವಾಸ್ತವ್ಯ ಮಾಡುತ್ತಿದ್ದೆ. ಆತ್ಮೀಯವಾಗಿ ಅವರ ಮನಗೆ ಊಟಕ್ಕೆ ಕರೆಯುತ್ತಿದ್ದರು. ಅವರ ಅಗಲಿಕೆ ವೈಯಕ್ತಿವಾಗಿ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.ದೇಶದಲ್ಲಿಯೇ ಹಿರಿಯ  ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ದೀರ್ಘ ಕಾಲ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ, ಕೊನೆಯ ಉಸಿರಿನವರೆಗೂ ಕೆಲಸ ಮಾಡಿದ್ದಾರೆ. ಬಹುದೀರ್ಘಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.  ದಾವಣಗೆರೆ ಜಿಲ್ಲೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದ್ದರೆ, ಅದಕ್ಕೆ ಶಾಮನೂರು ಶಿವಶಂಕರಪ್ಪನವರು ಕಾರಣ ಎಂದರು.

ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಮಾತನಾಡಿ, ಪ್ರಸ್ತುತ ವಿಧಾನಸಭೆಯ ಇಬ್ಬರು ಹಿರಿಯ ಶಾಸಕರನ್ನು ಕಳೆದುಕೊಂಡಿರುವುದು ದುಃಖದ ಸಂಗತಿಯಾಗಿದೆ. ತುಂಬಾ ಗಟ್ಟಿ ವ್ಯಕ್ತಿತ್ವ ಹೊಂದ್ದದ್ದ ಶಾಮನೂರು ಶಿವಶಂಕರಪ್ಪನವರು ನೇರ ನಿಷ್ಠರವಾಗಿ ಮಾತನಾಡುತ್ತಿದ್ದರು. ಧೀರ್ಘಕಾಲ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅವರ ವ್ಯಕ್ತಿತ್ವದ ಘನತೆ ಹೆಚ್ಚಿಸಿತ್ತು. ದೇಶದಲ್ಲಿ ಹಿರಿಯ ವಯಸ್ಸಿನ ಶಾಸಕ ಎನಿಸಿದ್ದರು. ಕೊನೆಯ ಕಾಲದವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿ ಹೇಳುತ್ತಿದ್ದರು. ದಾವಣಗೆರೆ ನಗರ ವಿದ್ಯಾಕಾಶಿ ಎಂದು ಹೆಸರು ಗಳಿಸಲು ಶಾಮನೂರು ಶಿವಶಂಕರಪ್ಪನವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ ಎಂದರು.

ನಂತರ ಹಲವು ಸಚಿವರು,ಶಾಸಕರು ಶಾಮನೂರು ಶಿವಶಂಕರಪ್ಪನವರಿಗೆ ನುಡಿ ನಮನ ಸಲ್ಲಿಸಿದರು.  ಬಳಿಕ ಮೃತರ ಗೌರವಾರ್ಥ ಒಂದು ನಿಮಿಷಗಳ ಕಾಲ ಮೌನ ಆಚರಿಸಿ ವಿಧಾನಸಭೆ ಕಲಾಪವನ್ನು ಮೊಟಕುಗೊಳಿಸಿ ಮಂಗಳವಾರ ಬೆಳಿಗ್ಗೆ 9:30 ಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್ ಮುಂದೂಡಿದರು.

ಮೇಲ್ಮನೆಯಲ್ಲಿ  ಸಂತಾಪ:

ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವಿಧಾನ ಪರಿಷತ್ ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ನಿರ್ಣಯ ಮಂಡಿಸಿದರು. ಈ ವೇಳೆ ನುಡಿನಮನ ಸಲ್ಲಿಸಿದ ಅವರು,1931ರ ಜೂನ್ 16ರಂದು ದಾವಣಗೆರೆಯಲ್ಲಿ ಜನಿಸಿದ್ದ ಶ್ರೀಯುತರು ಇಂಟರ್‍ಮೀಡಿಯೇಟ್‍ವರೆಗೂ ವ್ಯಾಸಂಗ ಮಾಡಿದ್ದರು. ಮೂಲತ: ಉದ್ಯಮಿಯಾಗಿದ್ದ ಅವರು 1969ರಲ್ಲಿ ದಾವಣಗೆರೆ ನಗರ ಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿ, 1971ರಲ್ಲಿ ದಾವಣಗೆರೆ ನಗರ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾದ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು.ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಅಂಗವಿಕಲ ಆಶಾಕಿರಣ ಟ್ರಸ್ಟ್, ಸ್ಪೋಟ್ರ್ಸ್ ಕ್ಲಬ್, ಬಾಪೂಜಿ ಇಂಜಿನಿಯರಿಂಗ್ ಅಸೋಸಿಯೇಷನ್ ಮತ್ತು ಇನ್ನಿತರ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸುವ ಮೂಲಕ ಸಮಾಜದ ಎಲ್ಲಾ ರಂಗಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು ಎಂದರು.

ಸಂತಾಪ ಸೂಚನೆ ನಿರ್ಣಯದ ಮೇಲೆ,ಸಭಾ ನಾಯಕರಾದ ಸಚಿವ ಎನ್.ಎಸ್.ಭೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸೇರಿದಂತೆ ಸಚಿವರ,ಪರಿಷತ್ ಸದಸ್ಯರು ಮಾತನಾಡಿದರು.ಮೃತರ ಗೌರವಾರ್ಥ ಎಲ್ಲಾ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನಾಚರಿಸಿದರು ನಂತರ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡಿದರು.


Share this with Friends

Related Post