Mon. Dec 23rd, 2024

ಜನ ನಾಯಕರು ಕಾನೂನು ಪಾಲಿಸಿ:ಕಾಂಗ್ರೆಸ್ ‌ನಾಯಕರಿಗೆ ಹೈಕೋರ್ಟ್ ಚಾಟಿ

Share this with Friends

ಬೆಂಗಳೂರು: ಜನ ನಾಯಕರು ಕಾನೂನು ಪಾಲಿಸಬೇಕೆಂದು ಕಾಂಗ್ರೆಸ್ ‌ನಾಯಕರಿಗೆ ಹೈಕೋರ್ಟ್ ಚಾಟಿ ಬೀಸಿದೆ.

ಜನಪ್ರತಿನಿಧಿಯಾದ ಮಾತ್ರಕ್ಕೆ ರಸ್ತೆ ಅಡ್ಡಗಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ, ಜನ ನಾಯಕರಾದವರು ಮೊದಲು ಕಾನೂನು ಪಾಲಿಸಬೇಕು ಎಂದು ಹೈಕೋರ್ಟ್‌ ಸಿದ್ದರಾಮಯ್ಯ‌ಮತ್ತು ಇತರ ಕಾಂಗ್ರೆಸ್‌ ನಾಯಕರಿಗೆ ಚಾಟಿ ಬೀಸಿದೆ.

ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಿದ್ದರಾಮಯ್ಯ ಅವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಖುದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದೆ.

ಎಲ್ಲಾ ಆರೋಪಿಗಳಿಗೆ 10 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌,ಮಾ6 ರಂದು ಸಿದ್ದರಾಮಯ್ಯ, ಮಾರ್ಚ್ 7 ರಂದು ರಾಮಲಿಂಗಾರೆಡ್ಡಿ, ಮಾರ್ಚ್ 11 ರಂದು ರಣದೀಪ್ ಸುರ್ಜೇವಾಲಾ, ಮಾರ್ಚ್ 15 ರಂದು ಎಂ.ಬಿ.ಪಾಟೀಲ್ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕು.ಜಹಿದಾ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿದ್ದರು. ಪ್ರಕರಣದಲ್ಲಿ ಅವರನ್ನು ಅನಗತ್ಯವಾಗಿ ಎಳೆದು ತಂದು ಪ್ರತಿವಾದಿಯನ್ನಾಗಿ ಕಾಂಗ್ರೆಸ್‌ ಮಾಡಿದ್ದಕ್ಕೆ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿದೆ.

ಈ ವೇಳೆ ಮೇಲ್ಮನವಿ ಸಲ್ಲಿಸುವವರೆಗೆ ಆದೇಶಕ್ಕೆ ತಡೆ ನೀಡಲು ಸಿದ್ದರಾಮಯ್ಯ ಪರ ವಕೀಲರು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಜನಪ್ರತಿನಿಧಿಗಳಾದವರು ಕಾನೂನು ಪಾಲಿಸಿದರೆ ಜನರೂ ಪಾಲಿಸುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ ಜನರಿಗೆ ಕಷ್ಟವಾಗುತ್ತದೆ. ಜನಪ್ರತಿನಿಧಿಯಾದ ಕಾರಣಕ್ಕೆ ರಸ್ತೆ ಅಡ್ಡಗಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಟು ಪದಗಳನ್ನು ಬಳಸಿ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ 2022ರ ಏಪ್ರಿಲ್ 14ರಂದು ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು.

ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಜಾಮೀನು ರಹಿತ ಬಂಧನ ವಾರೆಂಟ್ ಹಾಗೂ ವಿಶೇಷ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್ ಮತ್ತು ಎಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.


Share this with Friends

Related Post