Thu. Mar 13th, 2025

ಬಜೆಟ್ ನಲ್ಲಿ ಘೋಷಿಸಿದ್ದನ್ನು ಜಾರಿ ಮಾಡಿ ನುಡಿದಂತೆ ನಡೆದ ಸಿಎಂ

Share this with Friends

ಮಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ ನೆರವೇರಿಸಿ ನುಡಿದಂತೆ ನಡೆದಿದ್ದಾರೆ.

ಈ‌ ವೇಳೆ ಮಾತನಾಡಿದ ಸಿಎಂ, ರಾಜೀವ್ ಗಾಂಧಿ ವಿವಿ, ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವ ವಿದ್ಯಾಲಯ ಆಗಿದೆ. 3.5 ಲಕ್ಷ ವೈದ್ಯ ವಿದ್ಯಾರ್ಥಿಗಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲೂ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ ಮತ್ತು ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸಿಗುವಂತಾಗಬೇಕು. ಶ್ರೀಮಂತರು ಮತ್ತು ನಮ್ಮಂಥಾ ರಾಜಕಾರಣಿಗಳೂ ಸರ್ಕಾರಿ ಆಸ್ಪತ್ರೆಗೆ ಬರುವಂಥಾಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ ಗುರಿ. ಮಂಗಳೂರಿನಲ್ಲಿ ಉತ್ತಮ ಆರೋಗ್ಯ ಸೇವೆ ಇದ್ದರೂ ಈ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ‌. ಈ ದಿಕ್ಕಿನಲ್ಲೂ ಸರ್ಕಾರ ಯೋಚಿಸಿ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಗಳು ಭರವಸೆ ನೀಡಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿ ಆರೋಗ್ಯ ಸೇವೆ ಸರಳವಾಗಿ ಜನರಿಗೆ ಸಿಗುವ ದಿಕ್ಕಿನಲ್ಲಿ ಸಂಶೋಧನೆಗಳನ್ನು ಹೆಚ್ಚೆಚ್ಚು ನಡೆಸಬೇಕು. ದೇಶದ ಅತ್ಯುತ್ತಮ ಆರೋಗ್ಯ ಸೇವೆ ಬಡವರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಬಿಪಿಎಲ್ ಕಾರ್ಡ್ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತ ವಾಗಿ ನೀಡುವಂತೆ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಸಿದ್ದು ತಿಳಿಸಿದರು.

ಬಡವರಿಗೂ ಕೂಡ ದೊಡ್ಡ ದೊಡ್ಡ ಕಾಯಿಲೆಗಳು ಬರುತ್ತಿವೆ. ಕಿಡ್ನಿ ಕಸಿಗೆ 5000 ಮಂದಿ ಸಾಲಿನಲ್ಲಿದ್ದಾರೆ. ಕಿಡ್ನಿ ದಾನಿಗಳು ಸಿಕ್ಕರೆ ನಿತ್ಯ ಕಿಡ್ನಿ ಕಸಿ ಮಾಡುವ ನುರಿತ ವೈದ್ಯರ ತಂಡ ನಮ್ಮಲ್ಲಿದೆ ಎಂದು ಸಿಎಂ ಮಾಹಿತಿ ನೀಡಿದರು.






Share this with Friends

Related Post