Mon. Dec 23rd, 2024

ಸ್ವಾಮೀಜಿಯವರ ತಂಟೆಗೆ ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಅಶೋಕ್

Share this with Friends

ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಸರ್ಕಾರ ಮುಟ್ಟಲು ಬಂದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಸಿದರು.

ಸ್ವಾಮೀಜಿಯವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಸ್ವಾಮೀಜಿಯವರಿಗೆ ಧೈರ್ಯ ಹೇಳಿದ್ದೇವೆ ಹಾಗೂ ಒಕ್ಕಲಿಗ ಸಮಾಜದೊಂದಿಗೂ ನಾವಿದ್ದೇವೆ ಎಂದು ತಿಳಿಸಿದ್ದೇವೆ ಎಂದರು.

ವಕ್ಫ್ ಮಂಡಳಿ ಹಿಂದೂಗಳ, ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ನುಂಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಪಹಣಿ ಬದಲಿಸಲಾಗುತ್ತಿದೆ. ಹಿಂದೂಗಳಿಗಾಗುತ್ತಿರುವ ಅನ್ಯಾಯದ ವಿರುದ್ಧ ಅವರು ಮಾತನಾಡಿದ್ದು, ಬಳಿಕ ಅದರಲ್ಲಿ ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಇಷ್ಟಾದರೂ ಒಬ್ಬ ಮತಾಂಧ ದೂರು ನೀಡಿದ್ದಕ್ಕೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರೆ ಸರ್ಕಾರಕ್ಕೆ ಎಷ್ಟು ಧೈರ್ಯ ಎಂದು ಪ್ರಶ್ನಿಸಿದರು.

ಅಸಾದುದ್ಧೀನ್ ಓವೈಸಿ ದೇಶಕ್ಕೆ ಬೆದರಿಕೆ ಹಾಕುತ್ತಾರೆ. ಆಂಧ್ರಪ್ರದೇಶದಲ್ಲಿ ಮೌಲ್ವಿ ಸರ್ಕಾರಕ್ಕೆ ಬೆದರಿಕೆ ಹಾಕುತ್ತಾನೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡಲ್ಲ ಎಂದು ಕೆಲವರು ಹೇಳುತ್ತಾರೆ. ದೇವೇಗೌಡರನ್ನೇ ಖರೀದಿ ಮಾಡುತ್ತೇನೆಂದು ಸಚಿವ ಜಮೀರ್ ಹೇಳಿದ್ದರು. ಆದರೆ ಸರ್ಕಾರ ಅದರ ವಿರುದ್ಧ ಕ್ರಮ ವಹಿಸಿಲ್ಲ. ಒಕ್ಕಲಿಗರ ವಿರುದ್ಧ ಕಾಂಗ್ರೆಸ್ ದ್ವೇಷ ಸಾಧಿಸುವುದು ಹೇಯ. ಸರ್ಕಾರ ಸ್ವಾಮೀಜಿಯವರನ್ನು ಮುಟ್ಟುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಕಡಕ್ಕಾಗಿ ಹೇಳಿದರು

ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಸರ್ಕಾರ ಕ್ರಮ ವಹಿಸಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಒಮ್ಮೆ ಒಕ್ಕಲಿಗರ ಪರ ಮಾತಾಡಿದರೆ, ಮತ್ತೆ ಭಯೋತ್ಪಾದಕರನ್ನು ಬ್ರದರ್ ಎನ್ನುತ್ತಾರೆ. ಆದರೆ ಬಿಜೆಪಿ ಎಂದಿಗೂ ಹಿಂದೂಗಳ ಪರ ನಿಲ್ಲಲಿದೆ ಎಂದು ಹೇಳಿದರು.

ಸ್ವಾಮೀಜಿಯವರಿಗೆ ತಿಳಿ ಹೇಳುವ ಬದಲು ಪೊಲೀಸರು ನೋಟಿಸ್ ನೀಡಿದ್ದಾರೆ. ಈಗ ಒಕ್ಕಲಿಗ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ. ಸಮುದಾಯದ ವಿರುದ್ಧ ಸರ್ಕಾರ ಈ ರೀತಿ ದ್ವೇಷ ಕಾರುತ್ತಿರುವುದನ್ನು ಸಮುದಾಯದ ಜನರು ಗಮನಿಸಬೇಕು ಎಂದು ಅಶೋಕ್ ತಿಳಿಸಿದರು.


Share this with Friends

Related Post