ಕೋಲ್ಕತ್ತಾ,ಜೂ.17: ಗೂಡ್ಸ್ ರೈಲು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು 15 ಮಂದಿ ಮೃತಪಟ್ಟು 60 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಅಸ್ಸಾಂನ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಬರುತ್ತಿದ್ದಾಗ ನ್ಯೂ ಜಾಲ್ ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ ಎಂದು ವರದಿಗಳು ತಿಳಿಸಿವೆ.
ಘಟನೆ ನಡೆದ ಸ್ಥಳಕ್ಕೆ ವೈದ್ಯರು ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ರವಾನಿಸಲಾಗಿದೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ,ರೈಲ್ವೆ ಸಚಿವ ಅಶ್ವಿನ್‌ವೈಷ್ಣವ್,ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ,ಲೋಕಸಭೆ ಉಪಾಧ್ಯಕ್ಷ ಜಗದೀಪ್ ಧನ್ ಕರ್ ಮತ್ತಿತರರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ10 ಲಕ್ಷ ರೂ,ಗಾಯಗೊಂಡವರಿಗೆ 2ಲಕ್ಷ ರೂ ಪರಿಹಾರವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಮೃತರ ಕುಟುಂಬದವರಿಗೆ ಪಿ ಎಂ ಎನ್ ಆರ್ ಎಫ್ ನಿಂದ 2 ಲಕ್ಷ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು ಗಾಯಗೊಂಡವರಿಗೆ 50,000 ನೀಡಲಾಗುವುದು ಎಂದು ತಿಳಿಸಿದ್ದಾರೆ.