Fri. Mar 6th, 2026

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಡಾ.ಹಂಸಲೇಖ ಆಯ್ಕೆ

Share this with Friends

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಹಿರಿಯ ಸಂಗೀತ ನಿರ್ದೇಶಕ,ಸ್ವರ ಮಾಂತ್ರಿಕ ಡಾ.ಹಂಸಲೇಖ ಅವರನ್ನು ಆಯ್ಕೆ ಮಾಡಲಾಗಿದೆ.

2025-26ನೇ ಸಾಲಿನಲ್ಲಿ ಆಯೋಜಿಸಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿ’ಗೆ ಆಯ್ಕೆ ಸಮಿತಿಯನ್ನು ರಚಿಸಿ ಆದೇಶಿಸಲಾಗಿದ್ದ ಮೇರೆಗೆ ಈ ಆಯ್ಕೆ ಸಮಿತಿಯು ದಿನಾಂಕ:04/02/2026ರಂದು ಸಭೆ ಸೇರಿ ರಾಜ್ಯದ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಅವಿರೋಧವಾಗಿ ಆಯ್ಕೆ ಮಾಡಿರುವ ಮೂವರು ಸಂಭಾವ್ಯ ಗಣ್ಯರ ಪಟ್ಟಿಯನ್ನು ಲಗತ್ತಿಸುತ್ತಾ, ಈ ಪೈಕಿ ಒಬ್ಬರನ್ನು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಆಯ್ಕೆ ಮಾಡಿ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಕೋರಿತ್ತು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ “ಜೀವಮಾನ ಸಾಧನೆ ಪ್ರಶಸ್ತಿ’ಗೆ ರಾಜ್ಯದ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಗೀತ ರಚನೆಕಾರರು ಹಾಗೂ ಸಂಗೀತ ನಿರ್ದೇಶಕ” “ಡಾ.ಹಂಸಲೇಖ, ಇವರನ್ನು ಆಯ್ಕೆ ಮಾಡಿ ಆದೇಶಿಸಿದೆ.

ಡಾ. ಹಂಸಲೇಖ ಅವರ ಸಂಕ್ಷಿಪ್ತ ಪರಿಚಯ:

ಬಹುಮುಖ ಪ್ರತಿಭೆ: ಕೇವಲ ಸಂಗೀತ ನಿರ್ದೇಶನ ಮಾತ್ರವಲ್ಲದೆ, ಗೀತ ರಚನೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲೂ ಅವರು ತಮ್ಮ ಮುದ್ರೆ ಒತ್ತಿದ್ದಾರೆ.

ಕ್ರಾಂತಿಕಾರಿ ಬದಲಾವಣೆ:

80 ಮತ್ತು 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅವರು, ಜಾನಪದ ಸೊಗಡು ಮತ್ತು ಪಾಶ್ಚಾತ್ಯ ಸಂಗೀತದ ಸಮ್ಮಿಲನದ ಮೂಲಕ ಕ್ರಾಂತಿ ಮಾಡಿದವರು.

ಪ್ರಶಸ್ತಿಗಳು: 

ಈ ಹಿಂದೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಈಗ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (Biffes)  ಜೀವಮಾನ ಸಾಧನೆಯ ಈ ಅತ್ಯುನ್ನತ ಗೌರವ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ನೀಡಿದಂತಾಗಿದೆ.

​ಈ ಪ್ರತಿಷ್ಠಿತ ಪ್ರಶಸ್ತಿಯನ್ನು, ಫೆಬ್ರವರಿ 06  ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share this with Friends

Related Post