ನವದೆಹಲಿ:ತಂಬಾಕು ಹರಾಜು ವಿಷಯಕ್ಕೆ ಸಂಬಂಧಿಸಿ ತಮ್ಮ ಮನವಿಗೆ ಸ್ಪಂದಿಸಿ ಬೆಳೆಗಾರರ ಪರವಾಗಿ ಕ್ರಮ ವಹಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಧನ್ಯವಾದ ತಿಳಿಸಿದ್ದಾರೆ. ತಮ್ಮ ನಿರ್ಧಾರದಿಂದ ತಂಬಾಕು ಬೆಳೆಗಾರರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ ಎಂದು ಅವರು ವಿತ್ತ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಈ ಸಂಬಂಧ ನನ್ನೊಂದಿಗೆ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ಅರಕಲಗೂಡು ಶಾಸಕ ಎ. ಮಂಜು, ಪಿರಿಯಾಪಟ್ಟಣ ಮಾಜಿ ಶಾಸಕ ಮಹದೇವು ಹಾಗೂ ಹೆಚ್.ಡಿ. ಕೋಟೆಯ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕೃಷ್ಣ ನಾಯಕ್ ಮುಂತಾದವರು ನನ್ನೊಂದಿಗೆ ಚರ್ಚೆ ನಡೆಸಿದ್ದರು.ನನ್ನ ಮನವಿಗೆ ಸ್ಪಂದಿಸಿದ ವಿತ್ತ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹರಾಜು ಪ್ರಕ್ರಿಯೆ ಆರಂಭವಾಗಿ ತಂಬಾಕು ಬೆಳೆಗಾರರಿಗೆ ಅನುಕೂಲ ಆಗುತ್ತಿರುವುದು ಸಂತೋಷದ ಸಂಗತಿ. ನರೇಂದ್ರ ಮೋದಿ ಅವರ ಸರಕಾರ ಸದಾ ರೈತಪರ ಎನ್ನುವುದಕ್ಕೆ ಈ ಕ್ರಮವು ಉತ್ತಮ ಉದಾಹರಣೆ ಆಗಿದೆ.
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿ ಎಫ್ʼಸಿವಿ ತಂಬಾಕು ಮೇಲೆ ವಿಧಿಸಲಾಗಿದ್ದ ಶೇಕಡ 18ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ತೆಗೆದು ಹಾಕಿದೆ.ಈ ತಂಬಾಕಿನ ಮೇಲೆ ಶೇಕಡ 18ರಷ್ಟು ಅಬಕಾರಿ ಸುಂಕ ವಿಧಿಸಿದ್ದರಿಂದ ಖರೀದಿದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರವೇ ಉಳಿದಿದ್ದರು. ಇದರಿಂದ ಬೆಳೆದ ಬೆಳೆ ಮಾರಾಟವಾಗದೆ ರಾಜ್ಯದ ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ, ಅರಕಲಗೂಡು ಸೇರಿದಂತೆ ವಿವಿಧ ಭಾಗಗಳಲ್ಲಿನ ತಂಬಾಕು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು.
ಬೆಳೆಗಾರರು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಂಕಷ್ಟ ತೋಡಿಕೊಂಡಿದ್ದರು. ಈ ಸಂಬಂಧ ಸಚಿವರು ಬೆಂಗಳೂರಿನ ತಂಬಾಕು ಮಂಡಳಿ ವ್ಯಸ್ಥಾಪಕ ನಿರ್ದೇಶಕರು ಮತ್ತು ವಿಶಾಖಪಟ್ಟಣ ವಿಭಾಗದ ಕೇಂದ್ರೀಯ ಅಬಕಾರಿ ಮತ್ತು ಜಿಎಸ್ಟಿ ಮುಖ್ಯ ಆಯುಕ್ತರ ಜತೆ ನಡೆಸಲಾಗಿದ್ದ ಪತ್ರ ವ್ಯವಹಾರಗಳ ಕುರಿತ ಎಲ್ಲಾ ಮಾಹಿತಿಯನ್ನೂ ಪಡೆದುಕೊಂಡಿದ್ದರು.ನಂತರ ಸಚಿವರು ಈ ವಿಷಯವನ್ನು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದು, ತಂಬಾಕು ಮೇಲಿನ ಅಬಕಾರಿ ಸುಂಕವನ್ನು ರದ್ದು ಮಾಡಬೇಕು ಎಂದು ವಿನಂತಿಸಿದ್ದರು.
ಸಚಿವ ಕುಮಾರಸ್ವಾಮಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿರುವ ವಿತ್ತ ಸಚಿವರು, ತಂಬಾಕು ಮೇಲಿನ ಅಬಕಾರಿ ಸುಂಕ ವಿನಾಯಿತಿ ನಿರ್ಧಾರವನ್ನು ಕೈಗೊಂಡಿದ್ದಾರೆ.ಈ ಸಂಬಂಧ ಫೆಬ್ರವರಿ 1ರಂದು ಆದೇಶ ಹೊರಡಿಸಿರುವ ತಂಬಾಕು ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ ಹಾಗೂ ಫೆಬ್ರವರಿ 5ರಿಂದಲೇ ಹರಾಜು ಪ್ರಕ್ರಿಯೆ ಆರಂಭ ಮಾಡುವಂತೆ ನಿರ್ದೇಶನ ನೀಡಿದೆ.
ಏನಿದರ ಹಿನ್ನೆಲೆ?:
ತಂಬಾಕು ಮೇಲೆ ಅಬಕಾರಿ ಸುಂಕ ಮತ್ತು ಜಿಎಸ್ಟಿ ದರ ಏರಿಕೆ ವಿರೋಧಿಸಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಖರೀದಿ ಕಂಪನಿಗಳು ನಿರ್ಧರಿಸಿದ್ದವು. ಇದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡು ಮಾರುಕಟ್ಟೆ ಬಂದ್ ಆಗಿದ್ದವು. ರೈತರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದರು.
ಖರೀದಿ ಕಂಪನಿಗಳು ತಮ್ಮ ಮೇಲೆ ವಿಧಿಸಿರುವ ಅನುತ್ಪಾದಕ ತಂಬಾಕಿಗೆ ಅಬಕಾರಿ ಸುಂಕ ಹಾಗೂ ತಂಬಾಕು ಉತ್ಪನ್ನಗಳಿಗೆ ಜಿಎಸ್ಟಿ ಏರಿಕೆಯ ಹಿನ್ನಲೆಯಲ್ಲಿ ತಂಬಾಕು ಖರೀದಿ ಕಂಪನಿಗಳು ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿವೆ. ಇದರಿಂದಾಗಿ ಮಾರುಕಟ್ಟೆ ಬಂದ್ ಆಗಿದ್ದು, ರೈತರು ಕಷ್ಟಪಟ್ಟು ಬೆಳೆದ ತಂಬಾಕು ಒಣಗುತ್ತಿದೆ. ದಿನದಿನಕ್ಕೂ ಬೆಲೆ ಈಲಿಮುಖವಾಗುತ್ತುದೆ. ಈ ನಡುವೆ ಹರಾಜು ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಭಾಗವಹಿಸುವುದಿಲ್ಲವೆಂದು ಖರೀದಿದಾರರು ಘೋಷಿಸಿದ್ದರು. ಬೆಳೆಗಾರರು ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಸಚಿವ ಕುಮಾರಸ್ವಾಮಿ ಅವರು ಮಧ್ಯ ಪ್ರವೇಶಿದರು.

