ಮೈಸೂರು,ಮಾ.8: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳಿಗೆ ಆನ್ ಲೈನ್ ಮೂಲಕ 2.03 ಕೋಟಿ ವಂಚಿಸಿರುವ
ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಮೊದಲ ಪ್ರಕರಣದಲ್ಲಿ ನಿವೇದಿತಾ ನಗರದ ನಿವಾಸಿ ನಟರಾಜ್ ಜರ್ಮಲೆ ಅವರು 1,30,20,047 ರೂ ವಂಚನೆಗೆ ಒಳಗಾಗಿದ್ದರೆ ಇನ್ನೊಬ್ಬರು ವಿಜಯನಗರ ನಿವಾಸಿ ಮಂದಪ್ಪ ಅವರು 72,94,709 ರೂ ಗಳನ್ನ ಕಳೆದುಕೊಂಡಿದ್ದಾರೆ.
ನಟರಾಜ್ ಜರ್ಮಲೆ ಅವರನ್ನ ಸ್ಕೈಪ್ ಮೂಲಕ ಪರಿಚಯಿಸಿಕೊಂಡ ವಂಚಕ ತಾನು ಮುಂಬೈ ಪೊಲೀಸ್ ಅಧಿಕಾರಿ ಎಂದು ನಂಬಿಸಿ,ನಿಮ್ಮ ಆಧಾರ್ ಕಾರ್ಡ್ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗಿದೆ.ನಿಮ್ಮ ವಿರುದ್ದ ಎಫ್.ಐ.ಆರ್.ಆಗಿದೆ, ರಾಷ್ಟ್ರೀಯ ಭದ್ರತೆ ವಿಚಾರವಾಗಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆದರಿಸಿದ್ದಾನೆ.
ನಿಮ್ಮ ಆಧಾರ್ ಕಾರ್ಡ್ ಕಾನೂನು ಬಾಹಿರ ಜಾಹಿರಾತು,ಮನಿ ಲಾಂಡರಿಂಗ್ ಗೆ ಬಳಕೆಯಾಗಿದೆ.ಅಲ್ಲದೆ ಮಿನಿಸ್ಟರ್ ಗಳು ಮತ್ತು ಸರ್ಕಾರಿ ನೌಕರರ ಜೊತೆ ಸೇರಿಕೊಂಡು ಭ್ರಷ್ಟಾಚಾರದಲ್ಲಿ ಭಾಗಿಯಾದಂತೆ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾನೆ.
ಇದರಿಂದ ಗಾಬರಿಗೊಂಡ ನಟರಾಜ್ ಜರ್ಮಲೆ ಹಂತ,ಹಂತವಾಗಿ ವಿವಿದ ಬ್ಯಾಂಕ್ ಮೂಲಕ 1,30,20,047 ರೂಗಳನ್ನ ವರ್ಗಾಯಿಸಿದ್ದಾರೆ.ನಂತರ ತಾವು ಮೋಸ ಹೋಗಿರುವುದು ಗೊತ್ತಾಗಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ವಿಜಯನಗರದ ಮಂದಪ್ಪ ಎಂಬವರು ಇನ್ಸ್ಟಾಗ್ರಾಮ್ ಮೂಲಕ ಕೆಲವು ಕಂಪನಿಗಳ ಬಗ್ಗೆ ಮಾಹಿತಿ ಪಡೆದು ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ ಅವರ ಸಲಹೆಯಂತೆ ಸ್ಟಾಕ್ ಟ್ರೇಡಿಂಗ್ ಖಾತೆ ತೆರೆದಿದ್ದಾರೆ.
ಸ್ಟಾಕ್ ಗಳನ್ನ ಖರೀದಿಸಿ ಮಾರಾಟ ಮಾಡಿದರೆ ಲಾಭ ನೀಡುವುದಾಗಿ ನಂಬಿಸಿ ಹಂತ,ಹಂತವಾಗಿ 72,94,709 ರೂ ಗಳನ್ನು ಇನ್ವೆಸ್ಟ್ ಮಾಡಿಸಿ,ನಂತರ ಲಾಭವೂ ಇಲ್ಲ ಇನ್ವೆಸ್ಟ್ ಮಾಡಿದ ಹಣವೂ ಕೊಡದೆ ವಂಚನೆ ಮಾಡಿದ್ದಾರೆ.ನಂತರ ಮಂದಪ್ಪ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಂತಹ ಪ್ರಕರಣಗಳ ಬಗ್ಗೆ ಪೊಲೀಸರು ಪದೇ ಪದೇ ಜಾಗೃತಿ ಮೂಡಿಸುತ್ತಿದ್ದರು ನಮ್ಮ ನಾಗರಿಕರು ಎಚ್ಚೆತ್ತುಕೊಳ್ಳದೆ ಇರುವುದು ನಿಜಕ್ಕೂ ದುರ್ದೈವದ ಸಂಗತಿ.