ಮೈಸೂರು,ಫೆ.26: ಈ ಬಾರಿಯ ಲೋಕಸಭಾ ಚುನಾವಣೆಗೆ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಸುಮಾರು 26.55 ಲಕ್ಷ ಅಳಿಸಲಾಗದ ಶಾಯಿ ಪೂರೈಕೆ ಮಾಡಲಿದೆ.
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ 10 ಎಂಎಲ್ ಪ್ರಮಾಣದ 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲು ಪೂರೈಕೆ ಮಾಡುತ್ತಿದೆ.
10 ಎಂಎಲ್ ಬಾಟಲಿಯಿಂದ 700 ಮತದಾರರ ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಬಹುದು. ಮಾರ್ಚ್ 15ರೊಳಗೆ ದೇಶದ ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ ಆದೇಶ ನೀಡಲಾಗಿದೆ.
ಈಗಾಗಲೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ಮೈಲ್ಯಾಕ್ ಆಡಳಿತ ವರ್ಗ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡಿದೆ.
ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಳಿಸಲಾಗದ ಶಾಯಿಯನ್ನ ಪೂರೈಕೆ ಮಾಡುತ್ತಿದ್ದು ಇದು ಸಾಂಸ್ಕೃತಿಕ ನಗರಿಯ ಹೆಮ್ಮೆ.
ಭಾರತೀಯ ಚುನಾವಣಾ ಆಯೋಗ ಕಳೆದ ಡಿಸೆಂಬರ್ ನಲ್ಲೇ ಅಳಿಸಲಾಗದ ಶಾಯಿ ಪೂರೈಕೆಗೆ ಬೇಡಿಕೆ ಇಟ್ಟಿತ್ತು. 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳ ಪೂರೈಕೆಯಿಂದ ಮೈಲ್ಯಾಕ್ 55 ಕೋಟಿ ವಹಿವಾಟು ಮಾಡುತ್ತಿದೆ.
1937ರಲ್ಲಿ ಅಂದಿನ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ ಮೈಲ್ಯಾಕ್ ತಲೆ ಎತ್ತಿತು. ಸ್ವಾತಂತ್ರ್ಯ ನಂತರ ಮೈಸೂರು ಸರ್ಕಾರದ ಅಧೀನಕ್ಕೆ ಒಳಪಟ್ಟ ಮೈಲ್ಯಾಕ್ ನಂತರ ಮೈಸೂರು ಲ್ಯಾಕ್ ಅಂಡ್ ಪೇಂಟ್ಸ್ ಲಿಮಿಟೆಡ್ ಎಂದು ಮರು ನಾಮಕರಣಗೊಂಡಿತು.
ಬಳಿಕ 1989 ರಿಂದ ವಾರ್ನಿಷ್ ಉತ್ಪಾದನೆ ಆರಂಭಿಸಿತು,ತದನಂತರ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಯಿತು.