ಮೈಸೂರು,ಜು.26: ಮೂರನೇ ಆಷಾಢ ಶುಕ್ರವಾರ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದುಬಂದಿದೆ.
ಮುಂಜಾನೆ ನಾಡದೇವಿಗೆ ಅಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯ ನೆರವೇರಿಸಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು
ಚುಮುಚುಮು ಚಳಿ,ಸಣ್ಣ ಮಳೆಯನ್ನೂ ಲೆಕ್ಕಿಸದೆ ಭಕ್ತರು ಸರದಿಸಾಲಿನಲ್ಲಿ ನಿಂತು ದೇವಿಯ ದರುಶನ ಪಡೆದರು.
ಇಂದು ತಾಯಿಗೆ ನಾಗಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.ದೇವಾಲಯದ ಆವರಣ ಹಾಗೂ ಪ್ರಾಂಗಣವನ್ನ ವಿವಿಧ ಬಣ್ಣಗಳ ವಿದ್ಯುತ್ ದೀಪಗಳು ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು.
300 ರೂ ಹಾಗೂ 50 ರೂ ಟಿಕೆಟ್ ಪಡೆದ ಭಕ್ತರಿಗೆ ಮತ್ತು ವಿಐಪಿ ಗಳಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿತ್ತು.ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಭಕ್ತರು ನಾಡದೇವಿಯ ದರುಶನ ಪಡೆದು ಭಕ್ತಿ ಸಮರ್ಪಿಸಿ ಪುನೀತರಾದರು.
ಈ ವಾರ ಕೂಡಾ ಖಾಸಗಿ ವಾಹನಗಳ ಪ್ರವೇಶ ನಿರ್ಭಂದಿಸಲಾಗಿತ್ತು.ನಗರದ ಲಲಿತಮಹಲ್ ಹೆಲಿಪ್ಯಾಡ್ ನಿಂದ ಭಕ್ತರಿಗಾಗಿ ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಲಲಿತಮಹಲ್ ಹೆಲಿಪ್ಯಾಡ್ ಹಾಗೂ ಇಡೀ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.