Sat. Apr 19th, 2025

ಐದು ಗ್ಯಾರಂಟಿಗಳಿಗೆ ಐದು ವರ್ಷ ವಾರೆಂಟಿ ಇದೆ: ಸಿ.ಎಂ ಸ್ಪಷ್ಟನೆ

Share this with Friends

ಕೋಲಾರ, ಏ. 6: ಮೊದಲು ಗ್ಯಾರಂಟಿಗಳು ಜಾರಿ ಸಾಧ್ಯವೇ ಇಲ್ಲ ಎಂಬ ಸುಳ್ಳನ್ನು ಬಿಜೆಪಿ ಹುಟ್ಟಿಸಿತು,ಯೋಜನೆ ಜಾರಿಯಾದ ಬಳಿಕ ಹೊಸ ಸುಳ್ಳು ಸೃಷ್ಟಿಸಿದ್ದಾರೆ ಎಂದು ‌ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೋಲಾರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪರ ನಡೆಸಿದ ರೋಡ್ ಶೋ ವೇಳೆ‌ ಸಿದ್ದು ಮಾತನಾಡಿದರು.

ಈಗ ಚುನಾವಣೆ ನಂತರ ಗ್ಯಾರಂಟಿಗಳು ನಿಂತು ಹೋಗುತ್ತವೆ ಎಂಬ ಸುಳ್ಳು ಹರಡುತ್ತಿದ್ದಾರೆ, ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ, ಕಾಂಗ್ರೆಸ್ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ ಇದೆ ಎಂದು ಸ್ಪಷ್ಟಪಡಿಸಿದರು.

ಸೋಲುವ ಭೀತಿಯಿಂದ ಬಿಜೆಪಿ ಸೃಷ್ಟಿಸುವ ಸುಳ್ಳುಗಳಿಗೆ ಸೊಪ್ಪು ಹಾಕಬೇಡಿ,ಅದು ಸುಳ್ಳಿನ ಕಾರ್ಖಾನೆ ಇದ್ದಂತೆ, ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಘನತೆ ತಂದಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಿ ನಿಮ್ಮ ಮತಕ್ಕೆ ಮೌಲ್ಯ ತಂದು ಕೊಡುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದು ಸಿಎಂ ಭರವಸೆ ನೀಡಿದರು.

ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವು ಖಚಿತ ಎಂದು ಭವಿಷ್ಯ ನುಡಿದ ಸಿಎಂ,
ನಮ್ಮ ಅಭ್ಯರ್ಥಿ ಗೌತಮ್ ಸಜ್ಜನರು, ಸಾಮಾನ್ಯ ಕಾರ್ಯಕರ್ತರಾಗಿ ಬುಡಮಟ್ಟದಿಂದ ಬೆಳೆದು ಈಗ ಅಭ್ಯರ್ಥಿ ಆಗಿದ್ದಾರೆ, ಇವರು ಅತ್ಯಂತ ಬಹುಮತದಿಂದ ಗೆಲ್ಲುತ್ತಾರೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಗೌತಮ್ ಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದು ಮನವಿ ಮಾಡಿದರು.

ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್,ಅಡುಗೆ ಗ್ಯಾಸ್ ಸಿಲಿಂಡರ್, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ-ಕಾಳು, ತರಕಾರಿ ಸೇರಿ ಪ್ರತಿಯೊಂದರ ಬೆಲೆಯನ್ನು ವಿಪರೀತ ಏರಿಸಿತ್ತು. ಇದರಿಂದ ನಾಡಿನ ಪ್ರತೀ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂಕಷ್ಟಕ್ಕೆ ಸ್ಪಂದಿಸಿ ಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ಐದು ಗ್ಯಾರಂಟಿ ಭರವಸೆಗಳನ್ನು ಘೋಷಿಸಿದೆವು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಐದಕ್ಕೆ ಐದನ್ನೂ ಜಾರಿ ಮಾಡಿದೆವು ಎಂದು ಸಿದ್ದರಾಮಯ್ಯ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಮಾಜಿ ಸಚಿವ ರಮೇಶ್ ಕುಮಾರ್ , ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಸೇರಿ ಕೋಲಾರ ಜಿಲ್ಲೆಯ ಎಲ್ಲಾ ಶಾಸಕರು‌ ರೋಡ್ ಶೋನಲ್ಲಿ ಭಾಗವಹಿಸಿದ್ದರು.


Share this with Friends

Related Post