Fri. Mar 6th, 2026

ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾರ್ಪಾಡಿನೊಂದಿಗೆ ಮಹಾತ್ಮ ಗಾಂಧೀಜಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ 6 ಸಾವಿರ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ರಾಜಭವನ ಚಲೋ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್,ರಾಜ್ಯದಲ್ಲಿರುವ ಸುಮಾರು 6 ಸಾವಿರ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುತ್ತದೆ ಇದು ಕಾಂಗ್ರೆಸ್ ಪಕ್ಷದ ತೀರ್ಮಾನ.ಈ ಬಗ್ಗೆ ಮುಖ್ಯಮಂತ್ರಿಯವರಿಗೂ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದು ಪ್ರಕಟಿಸಿದರು.

“ಹಳ್ಳಿಗಳ ಉದ್ದಾರಕ್ಕೆ ನೀಡಿದ ಯೋಜನೆ ನರೇಗಾ. ಬಿಜೆಪಿಯಿಂದ ದೇಶಕ್ಕೆ ಹರಡುತ್ತಿದೆ ನಿರುದ್ಯೋಗದ ರೋಗ. ಬಿಜೆಪಿ ಗಾಂಧಿ ದ್ವೇಷಕ್ಕೆ ಧಿಕ್ಕಾರ. ನರೇಗಾ ರದ್ದಾಗಲು ಎಂದಿಗೂ ಬಿಡುವುದಿಲ್ಲ. ಬೇಡ ನಮಗೆ ವಿಬಿ ಗ್ರಾಮ್ ಜೀ. ಬೇಕೆ ಬೇಕು ನಮಗೆ ಗಾಂಧಿ. ಇವತ್ತು ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಹಿಂಜರಿಯುವುದಿಲ್ಲ, ಸರ್ಕಾರ ಇದ್ದರೂ ನಾವು ಜೈಲಿಗೆ ಹೋದರೂ ಸರಿ, ನರೇಗಾ ಯೋಜನೆ ಮರುಜಾರಿಗೆ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕರಾಳ ಕಾಯ್ದೆಯನ್ನು ಹಿಂಪಡೆದಂತೆ ಇದನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ” ಎಂದು ಸಂದೇಶ ಸಾರಿದರು.

ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ:

“ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದೀರಿ. ಇನ್ನುಮುಂದೆ ನಿಮ್ಮ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ. ಅವರ ಹೆಸರನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ:

“ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಈ ಯೋಜನೆ ಜಾರಿಯಾಗಿ 20 ವರ್ಷಗಳಿವೆ. ಕಳೆದ 11 ವರ್ಷಗಳಿಂದ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ನೀವು ಏನು ಮಾಡುತ್ತಿದ್ದಿರಿ? ನಮ್ಮ ಪಂಚಾಯ್ತಿಗಳಲ್ಲಿ ಅಕ್ರಮ ನಡೆದ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಯೋಜನೆಯನ್ನೇ ಬದಲಿಸುವುದೇ? ಆಮೂಲಕ ಮೂಗು ಕತ್ತರಿಸಿಕೊಳ್ಳುವ ಕೆಲಸ ಮಾಡುವುದು ಸರಿಯೇ?” ಎಂದು ಕಿಡಿಕಾರಿದರು.

“ಕೇಂದ್ರ ಬಿಜೆಪಿ ಸರ್ಕಾರ ನರೇಗಾ ಯೋಜನೆ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಎನ್ ಡಿಎ ಮೈತ್ರಿ ನಾಯಕ ಚಂದ್ರಬಾಬು ನಾಯ್ಡು ಅವರೇ ಈ ಯೋಜನೆಗೆ ಅಪಸ್ವರ ಎತ್ತಿದ್ದು, ಇದನ್ನು ಜಾರಿ ಸಾಧ್ಯವಿಲ್ಲ ಎಂದಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ನೂತನ ಕಾಯ್ದೆ ಹಿಂಪಡೆಯದಿದ್ದರೆ ಸರ್ಕಾರಕ್ಕೆ ಆಪತ್ತು ಎದುರಾಗಲಿದೆ. ಚಂದ್ರಬಾಬು ನಾಯ್ಡು ಅವರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ” ಎಂದರು.

“ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಹಕ್ಕು, ಪಂಚಾಯ್ತಿ ಅಧಿಕಾರ ಕಸಿಯುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯ್ತಿಯಲ್ಲಿ ನರೇಗಾ ಕಾರ್ಮಿಕರನ್ನು ಒಳಗೊಂಡು ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ” ಎಂದು ತಿಳಿಸಿದರು.


Share this with Friends

Related Post