Mon. Dec 23rd, 2024

ವಿದೇಶದವರು ಭಾರತವನ್ನು ನೋಡುವ ದೃಷ್ಠಿಕೋನ ಬದಲಾಗಿದೆ: ಡಾ. ಜೈ ಶಂಕರ

Share this with Friends

ಬೆಳಗಾವಿ,ಫೆ.28:(ಚಿಕ್ಕೋಡಿ): ಕಳೆದೊಂದು ದಶಕದಲ್ಲಿ ಭಾರತವು ಐದನೇ ಆರ್ಥಿಕಶಕ್ತಿ ವಲಯವಾಗಿ ಬೆಳೆದುನಿಂತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಪದ್ಮ ಶ್ರೀ ಡಾ.ಎಸ್.ಜೈಶಂಕರ ಹೇಳಿದರು.

ಔದ್ಯಮಿಕವಾಗಿ, ಆರೋಗ್ಯ ಶೈಕ್ಷಣಿಕವಾಗಿ ಡಿಜಿಟಲ್ ಭಾರತವು ಪ್ರಕಾಶಿಸುತ್ತಿದೆ. ಇದೆಲ್ಲವೂ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾದುದು ಎಂದು ತಿಳಿಸಿದರು.

ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷಹಿಂದೆ ಭಾರತ ಆರ್ಥಿಕವಾಗಿ ಹನ್ನೊಂದನೆಯ ಸ್ಥಾನವನ್ನು ಹೊಂದಿತ್ತು ಇಂದು ಆತ್ಮ ನಿರ್ಭರ ಯೋಜನೆಗಳಿಂದ ಐದನೇ ಸ್ಥಾನವನ್ನು ಪಡೆದುಕೊಂಡು ಜಗತ್ತಿಗೆ ಒಂದು ಸಂದೇಶವನ್ನು ನೀಡಿದೆ ಎಂದು ತಿಳಿಸಿದರು.

ಭಾರತವನ್ನು ವಿದೇಶದವರು ಮೊದಲಿನಂತೇ ನೋಡುವ ದೃಷ್ಟಿಕೋನ ಬದಲಾಗಿದೆ. ಒಂದು ಕಾಲದಲ್ಲಿ ದೇಶದಲ್ಲಿ ೧೭ ಪಾಸಪೋರ್ಟ್ ಕೇಂದ್ರಗಳು ಇದ್ದವು ಇಂದು ೫೨೭ ಕೇಂದ್ರಗಳಾಗಿವೆ. ಹೊಸ ಅನ್ವೇಷಣೆಗಳು, ಸ್ಟಾರ್ಟಅಪ್‌ಗಳು, ಉದ್ಯೋಗ-ಶೈಕ್ಷಣಿಕ ಹೊಸ ಕೌಶಲಗಳನ್ನು ಹುಟ್ಟುಹಾಕಿ ಭಾರತವನ್ನು ಜಾಗತಿಕವಾಗಿ ೩ನೇ ಶಕ್ತಿಶೀಲ ರಾಷ್ಟ್ರವನ್ನಾಗಿ ರೂಪಿಸುವುದು ಮೋದಿಜಿ ಕನಸಾಗಿದೆ ಎಂದು ಹೇಳಿದರು.

ಮೋದಿಜಿಯವರು ಕಳೆದ ದಶಕದಿಂದ ದೇಶಕ್ಕೆ ಅದ್ಭುತವಾದ ಯೋಜನೆಗಳನ್ನು ತರುವುದರ ಮೂಲಕ ಭಾರತ ಪ್ರಕಾಶಿಸುವಂತೆ ಮಾಡಿದ್ದಾರೆ. ಅನೇಕ ಯೋಜನೆಗಳನ್ನು ಜಾರಿ‌ಗೆ ತರುವ ಮೂಲಕ ಜನಸಾಮಾನ್ಯರನ್ನು
ಕೇಂದ್ರವಾಗಿಟ್ಟು‌ಕೊಂಡು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂದರು.

ಇನ್ನು ಕೆಎಲ್‌ಇ ಸಂಸ್ಥೆಯು ಶಿಕ್ಷಣ ,ಆರೋಗ್ಯ, ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾಗಿ ಸಾಧನೆ ಮಾಡಿದೆ. ಡಾ.ಪ್ರಭಾಕರ ಕೋರೆಯವರು ಹಾಗೂ ಅವರ ತಂಡದವರು ಚಿಕ್ಕೋಡಿಯನ್ನು ಬದಲಾಯಿಸಿದ್ದಾರೆ. ನಾನು ೪೫ ವರ್ಷಗಳ ನಂತರ ಇಲ್ಲಿ ಬಂದಿದ್ದೇನೆ ಇದು ಸಂತೋಷವೆನಿಸುತ್ತಿದೆ ಎಂದು ಹರ್ಷ‌ ವ್ಯಕ್ತಪಡಿಸಿದರು.

ಇಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಏನೂ ಇರಲಿಲ್ಲ. ಇಂದು ಚಿಕ್ಕೋಡಿ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬೆಳೆದುನಿಂತಿದೆ. ಕೆಎಲ್‌ಇ ಜಾಗತಿಕವಾಗಿ ಸಾಕಷ್ಟು ವಿಸ್ತರಿಸಿಕೊಂಡಿದೆ ಅದರ ಹಿಂದೆ ಕೋರೆಯವರ ಕನಸುಗಳು ಇಚ್ಛಾಶಕ್ತಿ ಅದ್ವಿತೀಯವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿಯವರು ಮಾತನಾಡಿ, ನಾನು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿ. ಕೆಎಲ್‌ಇ ಕಾಲೇಜಿನ ಮೂಲಕ ಪದವಿಯನ್ನು ಪಡೆದು ಬೆಳೆದವನು ಎಂದು ಸ್ಮರಿಸಿದರು.

ಅಂದರೆ ಕೆಎಲ್‌ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರ ಫಲವಾಗಿ ಅಸಂಖ್ಯ ವಿದ್ಯಾರ್ಥಿಗಳ ಬದುಕನ್ನು ಅರಳಿಸಿತು. ಇಂದು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದೆ. ಸಂಸ್ಥೆಯು ಡಾ.ಕೋರೆಯವರ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದರು.

ಪುಟ್ಟ ಶಾಲೆಯಿಂದ ೧೯೧೬ ರಲ್ಲಿ ಸ್ಥಾಪನೆಗೊಂಡ ಕೆಎಲ್‌ಇ ಸಂಸ್ಥೆ ಇಂದು ೩೧೦ ಅಂಗ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ೧ ಲಕ್ಷ ೪೦ ಸಾವಿರದಷ್ಟು ವಿದ್ಯಾರ್ಥಿಗಳು ಕೆಎಲ್‌ಇ ಶಿಕ್ಷಣಕಾಶಿಯಲ್ಲಿ ಅಧ್ಯಯನದಲ್ಲಿ ತೊಡಗಿದ್ದಾರೆ.
ಆಲೋಪತಿ-ಆಯುರ್ವೇದ-ಹೋಮಿಯೋಪಥಿ ಮೂರು ಚಿಕಿತ್ಸೆಗಳ ಮೂಲಕ ೪೫೦೦ ಹಾಸಿಗೆಗಳ ಬೃಹತ್ ಆರೋಗ್ಯಜಾಲವನ್ನು ಹೊಂದಿದೆ. ಬೆಳಗಾವಿಯಲ್ಲಿ ೩೦೦ ಹಾಸಿಗೆಗಳ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಸಿದ್ದಗೊಂಡಿದೆ. ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಕೆಎಲ್‌ಇ ಒಲಂಪಿಕ್ಸ್ದಲ್ಲಿ ಸಾಧನೆಗೆ ಅಣಿಯಾಗಲಿದೆ ಎಂದು ತಿಳಿಸಿದರು.

ಚಿಕ್ಕೋಡಿಯಲ್ಲಿ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆ ನೂತನ ಕಟ್ಟಡವು ಉದ್ಘಾಟನೆಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹರ್ಷತಂದಿದೆ. ಇತಿಹಾಸದಲ್ಲಿ ಇಂದಿನ ದಿನ ಐತಿಹಾಸಿಕ ಹಾಗೂ ಸುವರ್ಣ ದಿನವೆಂದು ನಾನು ಭಾವಿಸಿದ್ದೇನೆ. ಗಡಿ ಭಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿಯೇ ಕೆಎಲ್‌ಇ ಸಂಸ್ಥೆಯು ಅಂತರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿರುವುದು ಹೆಮ್ಮೆತಂದಿದೆ ಎಂದು ತಿಳಿಸಿದರು.

ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಕೆಎಲ್‌ಇ ನಿರ್ದೇಶಕರಾದ ಡಾ.ವಿ.ಎಸ್.ಸಾಧುನವರ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷರಾದ ಪ್ರವೀಣ ಕಾಂಬಳೆ, ಕೆಎಲ್‌ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.

ಡಾ.ಪ್ರಭಾಕರ ಕೋರೆಯವರು ಕೇಂದ್ರ ಸಚಿವ ಡಾ.ಎಸ್.ಜೈ ಶಂಕರ ಅವರಿಗೆ ಬಸವಣ್ಣನವರ ಬೆಳ್ಳಿಯ ಮೂರ್ತಿಯನ್ನು ನೀಡಿ ಸತ್ಕರಿಸಿದರು. ಶಿಕ್ಷಕಿ ಜಿನಲ್ ಶಹಾ, ಗಂಗಾ ಅರಭಾವಿ ನಿರೂಪಿಸಿದರು. ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.


Share this with Friends

Related Post