ಬೆಂಗಳೂರು: ಈ ಬಾರಿಯ ಅಟಲ್ ಪುರಸ್ಕಾರಕ್ಕೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ನಿರ್ದೇಶಕ ಡಾ.ಗೋವಿಂದ ರಂಗರಾಜನ್, ಲಯನ್ಸ್ ಆಸ್ಪತ್ರೆ ಸಂಸ್ಥಾಪಕ, ನೇತ್ರ ತಜ್ಞ ಡಾ.ಚಂದ್ರಶೇಖರ ಶೆಟ್ಟಿ, ಬೇಸ್ ಸಂಸ್ಥೆಯ ಸಂಸ್ಥಾಪಕ, ಪ್ರಯೋಗ ವಿಜ್ಞಾನ ಕೇಂದ್ರದ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನವನ್ನು ಇದೇ 25ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.ಅಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಎರಡು ಭಾಗವಾಗಿ ಮಾಡಿದ್ದು, ಒಂದು ಭಾಗದಲ್ಲಿ ಸಂವಾದ ನಡೆಸಲಾಗುವುದು. ಪಬ್ಲಿಕ್ ಯುನಿವರ್ಸಿಟಿ, ಪಠ್ಯಕ್ರಮ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಂತೆ ಸಂವಾದ ನಡೆಸಲಾಗುತ್ತದೆ. ಶಿಕ್ಷಣ- ತಂತ್ರಜ್ಞಾನ ಕ್ಷೇತ್ರದ 15 ಜನ ತಜ್ಞರು ಭಾಗವಹಿಸುತ್ತಾರೆ. ಸದ್ಗುರು ಮಧುಸೂದನ ಸಾಯಿ ಸ್ವಾಮಿಗಳು ಉದ್ಘಾಟಿಸುವರು ಎಂದರು.
ಸಂಜೆ ಎರಡನೇ ಭಾಗದಲ್ಲಿ ಅಟಲ್ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಸಂಸ್ಥೆಯ ಅಧ್ಯಕ್ಷ ಪ್ರೊ. ಕೃಷ್ಣೇಗೌಡರು ಭಾಗವಹಿಸುತ್ತಾರೆ. ಆನ್‍ಲೈನ್ ನೋಂದಣಿಗೆ ಅವಕಾಶವಿದೆ ಎಂದು ತಿಳಿಸಿದರು.
ಈ ಬಾರಿ ಪ್ರಶಸ್ತಿಯನ್ನು ಸಾಧಕರಾದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ನಿರ್ದೇಶಕ ಡಾ.ಗೋವಿಂದ ರಂಗರಾಜನ್, ಲಯನ್ಸ್ ಆಸ್ಪತ್ರೆ ಸಂಸ್ಥಾಪಕ, ನೇತ್ರ ತಜ್ಞ ಡಾ.ಚಂದ್ರಶೇಖರ ಶೆಟ್ಟಿ, ಬೇಸ್ ಸಂಸ್ಥೆಯ ಸಂಸ್ಥಾಪಕ, ಪ್ರಯೋಗ ವಿಜ್ಞಾನ ಕೇಂದ್ರದ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಭಾರತ ಸದೃಢವಾಗಿ ಬೆಳೆಯಲು, ಸಬಲೀಕರಣ ಕಾಣಲು, ವಿಶ್ವದ ಜೊತೆ ಸ್ಪರ್ಧಿಸಲು, ಪ್ರತಿಯೊಬ್ಬರಿಗೂ ಸಮಾನತೆ ನೀಡಲು ಇಂಥ ಜಾಗೃತಿ ಕಾರ್ಯಕ್ರಮಗಳ ಅವಶ್ಯವಿದೆ. ಗುಣಮಟ್ಟದ ಪರಿಪೂರ್ಣ ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿಸಿದರು.

