ನವದೆಹಲಿ: ಬೆಂಗಳೂರು ಟನಲ್ ರಸ್ತೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಹಾಗಾಗಿ ಕೇಂದ್ರದೊಂದಿಗೆ ಈ ಸಂಬಂಧ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಟನಲ್ ಯೋಜನೆಗೆ ಎರಡು ಮೂರು ಸಂಸ್ಥೆಗಳು ಬಿಡ್ ಮಾಡಿವೆ. ಪತ್ರಿಕೆಗಳ ವರದಿಗಳ ಮೂಲಕ ಯಾರು ಹಾಕಿದ್ದಾರೆ ಎಂದು ನೋಡಿದ್ದೇನೆ. ಟನಲ್ ರಸ್ತೆ ಯೋಜನೆಯನ್ನು ಬಿಲ್ಡ್ ಆಪರೇಟ್ ಟ್ರಾನ್ಸ್ ಪೋರ್ಟ್ ಮಾದರಿಯಲ್ಲಿ ಮಾಡಬೇಕಾಗಿದೆ. ಇದು ರಿಸ್ಕ್ ಇರುವ ಯೋಜನೆ ಎಂದು ಗೊತ್ತಿದೆ. ಅವರೇ ಬಂಡವಾಳ ಹಾಕಿ ಈ ಯೋಜನೆ ಮಾಡಬೇಕಿದೆ. ಬ್ಯಾಂಕರ್ ಗಳು ಬಂದು ನಮ್ಮನ್ನು ಮನವಿ ಮಾಡಿದರು. ಅದಕ್ಕೆ ನಾವು ನೀವು ಯಾರಿಗಾದರೂ ಫೈನಾನ್ಸ್ ಮಾಡಿ ಎಂದು ಹೇಳಿದ್ದೇವೆ. ಕೆಲವರಿಗೆ ಗಾಬರಿ ಇದೆ. ಮತ್ತೊಂದು ಕಡೆ ಒಂದೂವರೆ ಕಿಲೋ ಮೀಟರ್ ಟನಲ್ ರಸ್ತೆಗೆ ಮುಂದಾಗಿದ್ದು, ಇದರಿಂದ ಸುಮಾರು 25% ಸಂಚಾರ ದಟ್ಟಣೆ ನಿವಾರಣೆಯಾಗಲಿದೆ” ಎಂದು ತಿಳಿಸಿದರು.
ಗೋದಾವರಿ- ಕಾವೇರಿ ನದಿ ಜೋಡಣೆಯಲ್ಲಿ ಕೇವಲ 15 ಟಿಎಂಸಿ ನೀರನ್ನು ನೀಡುತ್ತಿದ್ದಾರೆ ಎಂದು ಕೇಳಿದಾಗ, “ಈ ಪ್ರಮಾಣ ನಮಗೆ ಸಾಲುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಗೋದಾವರಿ ನದಿ ನಮ್ಮ ರಾಜ್ಯಕ್ಕೆ ಹತ್ತಿರವಿಲ್ಲ. ದೂರವಿದೆ. ಅವರು ನಿಗದಿ ಮಾಡಲಿ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಆಮೇಲೆ ತೀರ್ಮಾನ ಮಾಡೋಣ”, ಆದರೂ“ಕುಡಿಯುವ ನೀರು ಹಾಗೂ ನೀರಾವರಿಗೆ ಬಳಸಬೇಕು ಎನ್ನುವ ಚಿಂತನೆ ಇದೆ” ಎಂದರು.
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ರಾಜ್ಯದ ಜನರಿಗೆ ಉಪಯೋಗವಾಗಲು ಕೇಂದ್ರ ಸರ್ಕಾರ 10 ಸಾವಿರ ಕೋಟಿ ಹಾಕಿ ನಮಗೆ 1 ಸಾವಿರ ಕೋಟಿ ಕೇಳುತ್ತಿರುವಾಗ ನಾವು ಈ ಯೋಜನೆ ಬೇಡ ಎನ್ನಲು ಆಗುತ್ತದೆಯೇ? ಸಮುದ್ರಕ್ಕೆ ಹೋಗುವ ನೀರನ್ನು ಜನರ ಅನುಕೂಲಕ್ಕೆ ಬಳಸಲು ನಮ್ಮ ಉದ್ದೇಶವಾಗಿದೆ” ಎಂದು ತಿಳಿಸಿದರು.
ಮೇಕೆದಾಟು ಯೋಜನೆ ವಿಚಾರವಾಗಿ ಕೇಳಿದಾಗ, “ಮೊದಲು ನಾವು ಕೇಂದ್ರ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಪರಿಷ್ಕೃತ ಡಿಪಿಆರ್ ಸಲ್ಲಿಸುತ್ತಿದ್ದೇವೆ. ರಾಮನಗರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕಚೇರಿ ಆರಂಭಿಸಲಾಗುತ್ತಿದೆ. ಅರಣ್ಯ ಇಲಾಖೆಯ ಎಷ್ಟು ಭೂಮಿ ಬೇಕಾಗುತ್ತದೆ. ಅದಕ್ಕೆ ಎಷ್ಟು ಪರ್ಯಾಯ ಭೂಮಿ ನೀಡಬೇಕು ಎಂದೆಲ್ಲಾ ತೀರ್ಮಾನ ಆಗಬೇಕಿದೆ. ಈಗಾಗಲೇ ಪರ್ಯಾಯ ಭೂಮಿಯನ್ನು ಗುರುತಿಸಲಾಗಿದೆ. ಅದೆಲ್ಲವನ್ನು ಮುಗಿಸಿಕೊಂಡು ಹಂತ ಹಂತವಾಗಿ ಮುಂದುವರಿಯುತ್ತೇವೆ. ಇದಕ್ಕೆ ಮಂಡ್ಯ ಅಥವಾ ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಬೇಕು. ಈ ಯೋಜನೆ ತಾಂತ್ರಿಕ ತೀರ್ಮಾನಗಳು ಸಿಡ್ಬ್ಲ್ಯೂಸಿಗೆ ಇರುತ್ತದೆ. ನಾವು ನಮ್ಮ ಪ್ರಸ್ತಾವನೆ ನೀಡುತ್ತೇವೆ. ನಂತರ ಮುಂದಿನ ಪ್ರಕ್ರಿಯೆ ಸಿಡ್ಬ್ಲ್ಯೂಸಿ ನಡೆಸಲಿದೆ” ಎಂದು ತಿಳಿಸಿದರು.

