Fri. Mar 6th, 2026

ನೈಸ್ ಕೇಸ್ ನಲ್ಲಿ ರಾಜ್ಯದ ನಡೆಗೆ ದೇವೇಗೌಡ ಅಸಮಧಾನ..!

Share this with Friends

ಬೆಂಗಳೂರು:ನೈಸ್‌‍ ಯೋಜನೆ ಕುರಿತು ಸುಪ್ರೀಂ ಕೋರ್ಟ್’ಗೆ ಸಲ್ಲಿಸಿದ ರಿಟ್‌’ನಲ್ಲಿ ತಮ್ಮನ್ನು ಪಾರ್ಟಿ ಮಾಡಿದ್ದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅಸಮಧಾನ ವ್ಯಕ್ತಪಡಿಸಿದ್ದು,  ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಿದೆ.ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಹೋರಾಟ ಮಾಡುವ ಶಕ್ತಿ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್‌ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಒಂದು ಸಲ್ಲಿಕೆಯಾಗಿದ್ದು, ಈ ಅರ್ಜಿಯಲ್ಲಿ ರಾಜ್ಯ ಸರ್ಕಾರ,  ಕೆಲವು ರೈತರು ಹಾಗೂ ನನ್ನನ್ನೂ ಸೇರಿಸಿ ಪಾರ್ಟಿ ಮಾಡಲಾಗಿದೆ. ನಾನು ಈ ರಾಜ್ಯದಲ್ಲಿ  ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಆದರೂ ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್‌‍ ಕಂಪನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್‌, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್‌‍ ಕಂಪನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಈಗಿನ ಮುಖ್ಯಮಂತ್ರಿಗಳಿಗೆ ಬಡವರ ಬಗ್ಗೆ ಎಲ್ಲಿಲ್ಲದ ಅನುಕಂಪ ಇದೆ ಎನ್ನುತ್ತಾರೆ ಆದರೆ ಮುಖ್ಯಮಂತ್ರಿ ಕಚೇರಿಯಲ್ಲೇ ಏಳೆಂಟು ಮಂದಿ ಕ್ಯಾಬಿನೆಟ್‌ ದರ್ಜೆ ಪಡೆದುಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದು ಇವರ ಆಡಳಿತದ ವೈಖರಿ ಎಂದು ದೇವೇಗೌಡರು ಲೇವಡಿ ಮಾಡಿದರು.

ಕೇಂದ್ರವನ್ನು ದೂರಿದರೆ ಪ್ರಯೋಜನ ಇಲ್ಲ:

ರಾಜ್ಯ ಸರ್ಕಾರ ಪ್ರತೀ ವಿಷಯಕ್ಕೂ ಕೇಂದ್ರ ಸರ್ಕಾರವನ್ನು ದೂರುತ್ತಾ ಕೂತರೆ ಪ್ರಯೋಜನ ಇಲ್ಲ. ಅದರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು  ಹಣಕಾಸು ಸಚಿವರಾಗಿದ್ದಾಗ ಕೇಂದ್ರ ಸರ್ಕಾರದಲ್ಲಿ ಡಾ. ಮನಮೋಹನ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದರು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಲು ಪತ್ರ ಬರೆದಾಗ ಕೇಂದ್ರ ಮನಮೋಹನ್‌ ಸಿಂಗ್‌, ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್‌, ನಬಾರ್ಡ್‌ ಯಾರೂ ಕೂಡ ಒಪ್ಪಿಗೆ ಕೊಡಲಿಲ್ಲ.ಈಗ ನೋಡಿದರೆ ರಾಜ್ಯ ಸರ್ಕಾರ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ. ಹೀಗೆ ಟೀಕೆ ಮಾಡುತ್ತಾ ಹೋದರೆ ಆಗುವ ಪ್ರಯೋಜನ ಏನು? ಮುಖ್ಯಮಂತ್ರಿ ಆದವರು ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಹೋಗಿ ರಾಜ್ಯಕ್ಕೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಬೇಕು ಎಂದರು.


Share this with Friends

Related Post