ಬೆಂಗಳೂರು:ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆಗೆ ಕಾಂಗ್ರೆಸ್ ತಗಾದೆ ತೆಗೆದಿದೆ ಆದರೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಆಳ್ವಿಕೆ ಮಾಡಿದ ಸಂದರ್ಭದಲ್ಲಿ ಎಲ್ಲಿಯಾದರೂ ಗಾಂಧೀಜಿ ಅವರ ಒಂದು ಪೋಸ್ಟರ್ ನೋಡಿದೀರಾ? ಎಲ್ಲಿಯಾದರೂ ಮಹಾತ್ಮಾ ಗಾಂಧಿ ಅವರ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಿದ್ದಾರಾ? ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನರೇಗಾ ಯೋಜನೆ ಹೆಸರನ್ನು ಬದಲಾವಣೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ನವರು ಆಡಳಿತ ನಡೆಸುತ್ತಿದ್ದಾಗ ಮಹಾತ್ಮ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ.ಈವರೆಗೂ ಮಹಾತ್ಮಗಾಂಧಿ ಬಗ್ಗೆ ಮಾತನಾಡದವರು ಈಗ ನೋಡಿದರೆ ಇಷ್ಟು ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ! ಕರ್ನಾಟಕದ ಗ್ಯಾರಂಟಿ ಬಿಹಾರದವರೆಗೂ ಹೋಯಿತು. ಅಲ್ಲಿ ವರ್ಕ್ ಆಗಲಿಲ್ಲ. ಮೋದಿ ಅವರಿಗೆ ದೇಶ ನಡೆಸಲು ಗೊತ್ತು. ಎಲ್ಲೆಲ್ಲಿ ಹಣ ಪೋಲಾಗ್ತಾ ಇದೆ ಅಂತ ಕೂಡ ಅವರಿಗೆ ಗೊತ್ತು. ಯಾವ ರಾಜ್ಯ ಹೇಗೆಲ್ಲಾ ಹಣ ಖರ್ಚು ಮಾಡುತ್ತಿದೆ ಎಂಬುದು ಕೂಡ ಅವರಿಗೆ ಗೊತ್ತು. ನಾನೇನು ಮೋದಿ ಅವರನ್ನು ಹೊಗಳಲು ಬಂದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನರೇಗಾಗೆ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಕೆಲಸದ ದಿನಗಳನ್ನು ಹೆಚ್ಚು ಮಾಡಿದ್ದಾರೆ. ರಾಮನ ಹೆಸರು ಇಟ್ಟುಕೊಂಡಿದ್ದಾರೆ ಅಂತಾರೆ. ನಮ್ಮ ಮನೆಗೆ ಬನ್ನಿ, ರಾಮ ಕೃಷ್ಣಾ ವೆಂಕಟೇಶ್ವರ ಎಲ್ಲರ ಫೋಟೋಗಳು ಇವೆ.ರಾಮ ಪುರುಷೋತ್ತಮ ಅಂತ ವಾಲ್ಮೀಕಿ ಹೇಳಿದ್ದಾರೆ. ಇದರ ಬಗ್ಗೆ ಇಷ್ಟು ಜಿಜ್ಞಾಸೆ ಯಾಕೆ? ಎಂದು ಮಾಜಿ ಪ್ರಧಾನಿಗಳು ಅಭಿಪ್ರಾಯಪಟ್ಟರು.
ಪಕ್ಷದ ಸಮಾವೇಶಗಳನ್ನು ಮಾಡುತ್ತೇವೆ:
ಜನವರಿ 30ರಂದು ಸಂಸತ್‌ನ ಜಂಟಿ ಅಧಿವೇಶನ ಶುರುವಾಗುತ್ತಿದ್ದು, ಅದಕ್ಕೂ ಮೊದಲೇ ಜನವರಿ 23ರಿಂದ 25ರ ನಡುವೆ ಹಾಸನ ಹಾಗೂ ಬಾಗಲಕೋಟೆ ಭಾಗದಲ್ಲಿ ಪಕ್ಷದ ವತಿಯಿಂದ ತಲಾ ಒಂದು ಸಮಾವೇಶ ನಡೆಸಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇನೆ. ರಾಜ್ಯ ಸರ್ಕಾರದ ವೈಫಲ್ಯಗಳು ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸದಿರುವುದರ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

