ಬೆಂಗಳೂರು: ಆಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಇರುವಂತೆಯೇ ಆಯುರ್ವೇದದಲ್ಲಿಯೂ ಸರಿಯಾದ ಮಾನದಂಡದಲ್ಲಿ ವಿಶೇಷ ತಜ್ಞರಿಗೆ ಸರ್ಟಿಫಿಕೇಟ್ ನೀಡುವ ಪದ್ಧತಿ ಬರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಆಯುರ್ವೇದ ಸಮ್ಮೇಳನ(Ayurveda World Summit) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಆಯುರ್ವೇದ ಒಂದು ಆಹಾರ ಪದ್ಧತಿ, ಬದುಕಿನ ರೀತಿಯಾಗಿದೆ. ಆಯುರ್ವೇದದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಲಿ, ಅದರಲ್ಲಿಯೂ ವಿಶೇಷ ತಜ್ಞ ವೈದ್ಯರು ಬರಲಿ. ಉದಾಹರಣೆಗೆ ಇಂದು ನಾವು ಆದುನಿಕ ಚಿಕಿತ್ಸಾ ವಿಧಾನದಲ್ಲಿ ಕಿಡ್ನಿ ತಜ್ಞರು ಅಂದಾಗ ಸುಲಭವಾಗಿ ನಂಬುತ್ತೇವೆ. ಹಾಗೆಯೇ ಆಯುರ್ವೇದದಲ್ಲಿಯೂ ಸರಿಯಾದ ಮಾನದಂಡದಲ್ಲಿ ವಿಶೇಷ ತಜ್ಞರಿಗೆ ಸರ್ಟಿಫಿಕೇಟ್ ನೀಡುವ ಪದ್ಧತಿ ಬರಬೇಕಾಗಿದೆ. ಆಗ ಸರಿಯಾದ ರೀತಿಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಎಲ್ಲರಿಗೂ ಸಹಕಾರಿಯಾಗಲಿದೆ ಎಂದರು.
ಆಯುರ್ವೇದ ಮತ್ತು ಯೋಗ ರೋಗ ಬರದಂತೆ ತಡೆಯುವ ಒಂದು ಜೀವನಕ್ರಮವಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ವೈಜ್ಞಾನಿಕ ತಳಹದಿಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಇವೆರಡೂ ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯಕರವಾಗಿ ಬದುಕಲು ಅವಶ್ಯಕವಾಗಿದೆ. ಯಾಕೆಂದರೆ ಇಂದು ನಾವು ಅಸಾಂಕ್ರಾಮಿಕ ರೋಗಗಳಿಂದಲೇ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದೇವೆ. ಅದಕ್ಕೆ ಕಾರಣ ಬದಲಾದ ಆಹಾರದ ಕ್ರಮ, ಒತ್ತಡದ ಜೀವನ ಶೈಲಿ, ದೈಹಿಕ ವ್ಯಾಯಾಮದ ಕೊರತೆ. ಮಾನಸಿಕ ಒತ್ತಡ ನಿರ್ವಹಣೆ ಬಹುದೊಡ್ಡ ತೊಡಕಾಗಿ ಸಮಾಜವನ್ನು ಕಾಡುತ್ತಿದೆ ಇದಕ್ಕೆಲ್ಲಾ ಯೋಗ ಮತ್ತು ಆಯುರ್ವೇದವೇ ಪರಿಹಾರ ಎಂದರು.
ದೊಡ್ಡಮಟ್ಟದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ದೇಶದ ಬೇರೆ ಬೇರೆ ಭಾಗದಿಂದ ಆಯುರ್ವೇದ ವ್ಯೆದ್ಯರು ಆಗಮಿಸಿದ್ದಾರೆ. ಡಾ.ಕಜೆ ಅವರ ಶ್ರಮ ಸಾರ್ಥಕವಾಗಬೇಕು ಎಂದು ಶುಭ ಕೋರಿದರು.

