ರಾಮನಗರ:ಬೆಂಗಳೂರು-ರಾಮನಗರ ಪ್ರದೇಶವು ತ್ವರಿತ ಬೆಳವಣಿಗೆಯನ್ನು ಕಾಣುತ್ತಿದೆ. ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ರೈಲ್ವೆ ಮೂಲಸೌಕರ್ಯವನ್ನು ನವೀಕರಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಇಂದು ಅಮೃತ ಭಾರತ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ಪುನರಾಭಿವೃದ್ಧಿಗೊಳ್ಳುತ್ತಿರುವ ರಾಮನಗರಂ ರೈಲು ನಿಲ್ದಾಣವನ್ನು ಸೊಕಮಣ್ಣ ಪರಿಶೀಲಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು,ರಾಮನಗರಂ ರೈಲು ನಿಲ್ದಾಣದ ಆಧುನೀಕರಣವನ್ನು ₹20.96 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಅಭಿವೃದ್ಧಿ ಕಾರ್ಯದಲ್ಲಿ ನಿಲ್ದಾಣದ ಸಂಚಾರ ಪ್ರದೇಶದ ನವೀಕರಣ, ಹೊಸ ಪಾದಚಾರಿ ಮೇಲ್ಸೇತುವೆ, ಹೊಸ ಪ್ಲಾಟ್ಫಾರ್ಮ್ ಶೆಲ್ಟರ್ಗಳು ಮತ್ತು ನಿರೀಕ್ಷಣಾ ಕೊಠಡಿ, ಹೆಚ್ಚುವರಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್, ಮೂರು ಲಿಫ್ಟ್ಗಳು ಮತ್ತು ಒಂದು ಎಸ್ಕಲೇಟರ್ ಮತ್ತು ಹೊಸ ಶೌಚಾಲಯ ನಿರ್ಮಾಣ ಆಗಲಿದ್ದು ಇದು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ.ಬೆಂಗಳೂರು ದಕ್ಷಿಣ ಜಿಲ್ಲೆಯು ಅಪಾರ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆ ಅವರು ಕರೆ ನೀಡಿದರು. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಮು(MEMU) ರೈಲು ಸೇವೆಗಳು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿವೆ. ದೇಶಾದ್ಯಂತದ ಎಲ್ಲಾ ರಸ್ತೆ ಕೆಳ ಸೇತುವೆಗಳು (RUBs) ಮತ್ತು ರಸ್ತೆ ಮೇಲ್ಸೇತುವೆಗಳ ನಿರ್ಮಾಣದ (ROBs) ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಲಿದೆ. ಭಾರತದಾದ್ಯಂತ ಸುಮಾರು 98% ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿದೆ ಮತ್ತು ಕರ್ನಾಟಕ ಸೇರಿದಂತೆ ರಾಷ್ಟ್ರವ್ಯಾಪಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಪರಿಶೀಲನೆಯ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ. ಎನ್. ಮಂಜುನಾಥ್ ಮತ್ತು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಉಪಸ್ಥಿತರಿದ್ದರು.
ನಿಲ್ದಾಣದಲ್ಲಿ, ಸಚಿವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲು ಮನವಿಗಳನ್ನು ಸ್ವೀಕರಿಸಿದರು.
ಇದಕ್ಕೂ ಮೊದಲು, ರೈಲ್ವೆ ರಾಜ್ಯ ಸಚಿವರು ಬಿಡದಿ ರೈಲು ನಿಲ್ದಾಣವನ್ನು ಪರಿಶೀಲಿಸಿದರು. ಅಲ್ಲಿ ನಡೆಯುತ್ತಿರುವ ಪಾದಚಾರಿ ಸೇತುವೆ ವಿಸ್ತರಣೆ ಮತ್ತು ಪ್ಲಾಟ್ಫಾರ್ಮ್ ವಿಸ್ತರಣೆ ಕಾಮಗಾರಿಗಳನ್ನು ಪರಿಶೀಲಿಸಿದರು. ಬಿಡದಿಯಲ್ಲಿರುವ ಟೊಯೋಟಾ ಉತ್ಪಾದನಾ ಘಟಕಕ್ಕೂ ಭೇಟಿ ನೀಡಿ ರೈಲ್ವೆ ಮೂಲಕ ವಾಹನಗಳ ಸಾಗಣೆಯ ಬಗ್ಗೆ ಪರಿಶೀಲಿಸಿದರು.

