Fri. Mar 6th, 2026

ಬೆಳೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳಿಂದ ಗೋಲ್ ಮಾಲ್: ಬಸವರಾಜ ಬೊಮ್ಮಾಯಿ

Share this with Friends

ಗದಗ:ಬೆಳೆಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಿಕೆಯಲ್ಲಿಯೂ ಮಧ್ಯವರ್ತಿಗಳಿಂದ ಅನ್ಯಾಯವಾಗಿದ್ದು ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೈತರಿಗೆ ಸಿಗಬೇಕಾದ ಪರಿಹಾರದ ಹಣ ವಿತರಣೆಯಲ್ಲಿ ಲೋಪವಾಗಿದೆ.ಬೆಳೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳು ಗೋಲ್ ಮಾಲ್ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ ಎಂದರು.

ನಾನು ಮುಖ್ಯಮಂತಿ ಇದ್ದಾಗ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡು ಪಟ್ಟು ಪರಿಹಾರ ನೀಡಿದ್ದೇ. ಒಣ ಬೇಸಾಯಕ್ಕೆ ನಾನು 12500 ರೂ. ಕೊಟ್ಟಿದ್ದೆ. ನೀರಾವರಿಗೆ 25 ಸಾವಿರ. ತೋಟಗಾರಿಕೆಗೆ 28 ಸಾವಿರ ರೂ.ಪರಿಹಾರ ನೀಡಿದ್ದೆ. ರೈತರ ಪರ ಸರ್ಕಾರ ಇದ್ದರೆ ಪರಿಹಾರ ಸಿಗುತ್ತದೆ. ರಾಜ್ಯದಲ್ಲಿ ರೈತರ ಪರ ಸರ್ಕಾರ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಒಳ್ಳೆಯ ಕೆಲಸ ನಿಲ್ಲಿಸಬಾರದು:

ಜನರನ್ನು ಕಟ್ಟಿಕೊಂಡು ಜನರಿಂದಲೇ ಈ ದೇಶವನ್ನು ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಇದನ್ನು ನೋಡಿ ನಾವು ನಮ್ಮೂರಿನಲ್ಲಿ ಹೊಸದೇನನ್ನಾದರೂ ಆದರ್ಶವಾದ ಯೋಜನೆ ಹಾಕಿಕೊಳ್ಳಬೇಕು. ಅದಕ್ಕೆ ಸರ್ಕಾರ ಸಹಾಯ ಮಾಡುತ್ತದೆ. ನಮ್ಮ ಸರ್ಕಾರವಿದ್ದಾಗ ಎಫ್ ಪಿಒಗಳಿಗೆ ನಾಲ್ಕು ಐದು ಲಕ್ಷ ಸಹಾಯ ಧನ ನೀಡುತ್ತಿತ್ತು. ಈ ಸರ್ಕಾರ ಅದನ್ನು ನಿಲ್ಲಿಸಿದೆ. ಪ್ರಗತಿಪರವಾದ ಯಾವುದೇ ಕೆಲಸವನ್ನು ನಿಲ್ಲಿಸುವ ಕೆಲಸವನ್ನು ಮಾಡಬಾರದು, ಜನರಿಗೆ ಒಳ್ಳೆಯದಾಗುವುದನ್ನು ನಿಲ್ಲಿಸಿದರೆ ಜನರಿಗೆ ಅನ್ಯಾಯವಾಗುತ್ತದೆ. ನಾನು ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೆ. ಡಿಸೇಲ್ ಸಬ್ಸಿಡಿ ಕೊಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ಹಿಂದೆ ಎಸ್. ಎಂ. ಕೃಷ್ಣ ಸಿಎಂ ಆಗಿದ್ದಾಗ ಅವರು ರೈತರಿಗಾಗಿ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದರು. ಅದನ್ನು ಮುಂದಿನ ಸರ್ಕಾರ ನಿಲ್ಲಿಸಿತ್ತು. ನಾನು ಸಹಕಾರ ಸಚಿವ ಇದ್ದಾಗ ಸಹಕಾರಿಗಳು ಬಂದು ಯಶಸ್ವಿನಿ ಯೋಜನೆ ಜಾರಿಗೆ ಆಗ್ರಹಿಸಿದ್ದರು. ನಾನು ಸಿಎಂ ಆಗಿದ್ದಾಗ ಅದನ್ನು ಮತ್ತೆ ಆರಂಭಿಸಿದೆ. 300 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಇವತ್ತಿನ ಸರ್ಕಾರ ಹಿಂದಿನ ಸರ್ಕಾರದ ಒಳ್ಳೆಯ ಯೋಜನೆಗಳನ್ನು ನಿಲ್ಲಿಸುವ ಕೆಲಸ ಮಾಡುತ್ತಿದೆ. ಕೆ ಶಿಪ್ ಯೋಜನೆ ನಮ್ಮ ಕಾಲದಲ್ಲಿ ಆರಂಭವಾಗಿತ್ತು. ಅದನ್ನು ನಿಲ್ಲಿಸಿ ಈಗ ಆರಂಭಿಸಿದ್ದಾರೆ. ಜನರ ಪರವಾಗಿರುವ ಕೆಲಸ ಆಗಬೇಕು ಅದೇ ಪ್ರಜಾರ್ಪಭುತ್ವದ ಗೆಲುವಾಗುತ್ತದೆ ಎಂದರು


Share this with Friends

Related Post