Fri. Nov 1st, 2024

ಕೋಟ್ಯಂತರ ರೂ ಮೌಲ್ಯದ ಜಾಗ ಅಲ್ಪಸಂಖ್ಯಾತರ ಇಲಾಖೆಗೆ:ಅಶೋಕ್ ಆರೋಪ

Share this with Friends

ಬೆಂಗಳೂರು,ಫೆ.29: ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಕೋಟ್ಯಂತರ ರೂ ಮೌಲ್ಯದ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು.

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇಂದು ಸರ್ಕಾರದ ವಿರುದ್ಧ‌ ಬಿಜೆಪಿ ಶಾಸಕರು ನಡೆಸಿದ‌ ಧರಣಿ ವೇಳೆ ಅಶೊಕ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ಅಲ್ಪಸಂಖ್ಯಾತರನ್ನು ಓಲೈಸುವ ನಿರ್ಧಾರಗಳನ್ನೇ ಮಾಡುತ್ತಿದೆ. ಮತಕ್ಕಾಗಿ ಸರ್ಕಾರದ ಆಸ್ತಿಗಳನ್ನು ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ,ಈ ಆದೇಶವನ್ನು ತಕ್ಷಣ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಕುವೆಂಪು ವಾಣಿ ತೆಗೆದುಹಾಕುವ, ನಾಡಗೀತೆ ಕಡ್ಡಾಯದಿಂದ ವಿನಾಯಿತಿ ನೀಡುವ, ಪಾಕಿಸ್ತಾನಕ್ಕೆ ಜೈಕಾರ ಹಾಕಲು ಅವಕಾಶ ಮಾಡುವಂತಹ ನೀಚ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಸುಮಾರು 500 ಕೋಟಿ ರೂ. ಬೆಲೆಬಾಳುವ, ಮೈಸೂರು ರಸ್ತೆ ಬಳಿ ಇರುವ, ಚಾಮರಾಜಪೇಟೆಯ ಭೂಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ವಕ್ಫ್ ಮಂಡಳಿಯವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಲೂಟಿ ಹೊಡೆದಿದ್ದು, ಅದೇ ಭೂಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಬಹುದಿತ್ತು. ಅದನ್ನು ಬಿಟ್ಟು ಅಲ್ಪಸಂಖ್ಯಾತರನ್ನು ಓಲೈಸಲು ಪಶುಸಂಗೋಪನೆ ಇಲಾಖೆಯ ಜಾಗವನ್ನು ಲೂಟಿ ಮಾಡಬಾರದು‌ ಎಂದು ಅಶೋಕ್ ಹೇಳಿದರು.

ಈಗಾಗಲೇ ದೇವಸ್ಥಾನಗಳ ಹುಂಡಿಯಿಂದ ಹಣ ತೆಗೆದಿದೆ, ಈಗ ಪಶುಸಂಗೋಪನೆ ಇಲಾಖೆಗೂ ಕನ್ನ ಹಾಕಲಾಗಿದೆ. ಹೀಗೆ ಮಾಡಿದರೆ ಪಶುಗಳ ಆರೈಕೆ, ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಪಶುಗಳ ಚಿಕಿತ್ಸೆಗೆ ದೂರದ ಕೆಂಗೇರಿಗೆ ಹೋಗಲು ಸಾಧ್ಯವೇ ಎಂದು ಕಾರವಾಗಿ ಪ್ರಶ್ನಿಸಿದರು‌.

ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವುದರಿಂದ ಜಮೀನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗಾದರೆ ಮುಜರಾಯಿ ಇಲಾಖೆಯ ಜಾಗವನ್ನೂ ಬರೆದುಕೊಡುತ್ತಾರೆಯೇ.

ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಸರ್ಕಾರ ಪದೇ ಪದೆ ಎಡವಟ್ಟು ಮಾಡುತ್ತಿದೆ. ಈ ಕುರಿತು ರಾಜ್ಯದ ಜನರು ಎಚ್ಚರದಿಂದಿರಬೇಕು,ಜನರ ಆಸ್ತಿಯನ್ನು ಕೂಡ ಅಲ್ಪಸಂಖ್ಯಾತ ಇಲಾಖೆಗೆ ನೀಡಿದರೂ ಅಚ್ಚರಿ ಪಡಬೇಕಿಲ್ಲ ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಯಾರೇ ಭೂಮಿ ದಾನ ಮಾಡಿದರೂ ಅದು ಸರ್ಕಾರದ ಆಸ್ತಿಯಾಗಿರುತ್ತದೆ‌. ಅದನ್ನು ಹೀಗೆ ಬೇರೆ ಇಲಾಖೆಗೆ ನೀಡಬಾರದು. ಬೇರೆ ಖಾಲಿ ಜಮೀನುಗಳನ್ನು ನೀಡಲು ನಮ್ಮ ಆಕ್ಷೇಪ ಇಲ್ಲ. ಆದರೆ ಈಗಾಗಲೇ ಬಳಕೆಯಲ್ಲಿರುವ ಪಶುಸಂಗೋಪನೆ ಇಲಾಖೆಯ ಜಮೀನನ್ನು ನೀಡಬಾರದು ಎಂದು ಕಡಕ್ಕಾಗಿ ಹೇಳಿದರು

ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಘಟನೆಯಲ್ಲಿ ಸರ್ಕಾರವೇ ಶಾಮೀಲಾಗಿದೆ. ಅದಕ್ಕಾಗಿಯೇ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಅಶೋಕ್‌ ಕಿಡಿಕಾರಿದರು.


Share this with Friends

Related Post