ಬೆಂಗಳೂರು: ಜಿ ರಾಮ್ ಜಿ ವಿರೋಧಿಸಿ ರೈತರ ಜೊತೆಯಲ್ಲಿ ಗ್ರಾಮೀಣ ಕೂಲಿಕಾರರು, ಮಹಿಳೆಯರು ಬೀದಿಗೆ ಇಳಿಯಲು ಸಜ್ಜಾಗಿದ್ದು ನಾವೂ ಸಹ ಸಂವಿಧಾನದ ವ್ಯಾಪ್ತಿಯಲ್ಲಿಯೆ ಇನ್ನಷ್ಟು ತೀವ್ರವಾಗಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ. ಮೊದಲಿದ್ದ ಮನರೇಗಾ ಕಾಯ್ದೆಯನ್ನು ಇನ್ನಷ್ಟು ಸಶಕ್ತಗೊಳಿಸುವ ಮೂಲಕ ಮರುಜಾರಿಗೊಳಿಸಬೇಕು. ಈ ಹೊಸ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್.ಎಸ್.ಎಸ್. ಮತ್ತು ಬಿಜೆಪಿ ಸೇರಿ ಏಕಕಾಲದಲ್ಲಿ ಶೇ.53 ರಷ್ಟಿರುವ ಮಹಿಳಾ ನರೇಗಾ ಕೂಲಿ ಕಾರ್ಮಿಕರು, ಶೇ.28 ರಷ್ಟಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಾರ್ಮಿಕರು, 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿಕಲಚೇತನರು ಸೇರಿದಂತೆ ಗ್ರಾಮೀಣ ಆರ್ಥಿಕತೆಯ ಆಧಾರ ಸ್ತಂಭವಾಗಿದ್ದ ನರೇಗಾ ಯೋಜನೆಯನ್ನು ಕೊಂದಿದ್ದಾರೆ. ಅದೇ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಹಾಕುವ ಮೂಲಕ ಗೋಡ್ಸೆಯ ನಂತರ ಎರಡನೇ ಬಾರಿ ಬಿಜೆಪಿಯು ಗಾಂಧಿಯನ್ನು ಹತ್ಯೆ ಮಾಡಿದಂತಾಗಿದೆ ಎಂದು ಆರೋಪಿಸಿದರು.
ಕಳೆದ 20 ವರ್ಷಗಳಿಂದ ದೇಶದ ಗ್ರಾಮೀಣ ಕೂಲಿಕಾರರು ಮತ್ತು ಸಣ್ಣ ರೈತರ ಜೀವನೋಪಾಯಕ್ಕೆ ಆಧಾರವಾಗಿದ್ದ ಹಾಗೂ ಉದ್ಯೋಗವನ್ನು ಸ್ಥಳೀಯವಾಗಿಯೇ ಕೇಳಿ ಪಡೆಯುವ ಹಕ್ಕು ನೀಡಿದ್ದ ಮನರೇಗಾ ಕಾಯ್ದೆಯನ್ನು, ಮೋದಿ ಸರ್ಕಾರವು ಜನರ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಜೊತೆ ಸಮಾಲೋಚನೆ ಮಾಡದೆ, ಅಭಿಪ್ರಾಯವನ್ನೂ ಪಡೆಯದೆ ಸರ್ವಾಧಿಕಾರಿ ಧೋರಣೆಯ ಮೂಲಕ ಧ್ವಂಸ ಮಾಡಿದೆ.ಸರ್ವಾಧಿಕಾರಿ ಧೋರಣೆಯ ಮೋದಿ ಸರ್ಕಾರವು ಹಿಟ್ಲರ್ ಮತ್ತು ಮುಸಲೋನಿ ಸ್ವಭಾವವನ್ನು ಮೈಗೂಡಿಸಿಕೊಂಡಿರುವುದರಿಂದ ಈ ಯಾವುದೂ ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.
ವೋಟ್ ಚೋರಿಯ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಕಾಂಗ್ರೆಸ್ ಪಕ್ಷ ಅಭಿಯಾನ ಹಮ್ಮಿಕೊಂಡಿದ್ದಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಸರ್ಕಾರ ಕುತಂತ್ರ ಮಾಡಿದಂತಿದೆ. ಈ ಹೊಸ ಕಾಯ್ದೆಯ ಹೆಸರಿನಲ್ಲಿ ರಾಮನ ಹೆಸರನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ರಾಮನ ಹೆಸರು ಹೇಳುತ್ತಲೇ ಇಡೀ ದೆಹಲಿಯಿಂದ ಹಿಡಿದು ಗುಜರಾತ್ ವರೆಗೆ ಹಬ್ಬಿದ್ದ ಅರಾವಳಿ ಪರ್ವತದ ಸಂಪತ್ತನ್ನು ದೋಚಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಮುಗ್ಧ ಆದಿವಾಸಿಗಳು ವಾಸಿಸುತ್ತಿದ್ದ ಮಧ್ಯ ಭಾರತದ ಕಾಡುಗಳನ್ನು ಧ್ವಂಸ ಮಾಡಿ, ಅಲ್ಲಿ ಗಣಿಗಾರಿಕೆ ಮಾಡಲು ಅದಾನಿ-ಅಂಬಾನಿಯವರ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡಲು ಹೊರಟಿದ್ದಾರೆ. ಹಾಗಾಗಿ ಯಾವ ಕಾರಣಕ್ಕೂ ಇವರು ಜನಪರವಾದ ಆಡಳಿತ ಕೊಡಲು ಸಾಧ್ಯವೇ ಇಲ್ಲ. ನೀರು, ಗಾಳಿ, ಮಣ್ಣು, ಶಿಕ್ಷಣ, ಉದ್ಯೋಗದ ಹಕ್ಕುಗಳನ್ನು ಕಸಿದು ಲೂಟಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ದೇಶದ ಸಣ್ಣ ರೈತರು, ಕೂಲಿ ಕಾರ್ಮಿಕರು, ತಾವು ವಾಸಿಸುವ ಜಾಗದಲ್ಲಿದ್ದುಕೊಂಡೆ, ತಮ್ಮ ಸಮೀಪದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ತಮ್ಮ ಕೃಷಿ ಕೆಲಸಗಳ ಜೊತೆಯಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕುಟುಂಬವನ್ನು ಹಾಗೂ ತಮ್ಮ ಗ್ರಾಮಗಳ ಆರ್ಥಿಕತೆಯನ್ನು ಕಟ್ಟಿ ಬೆಳೆಸುತ್ತಿದ್ದರು. ಆದರೆ, ಅವುಗಳನ್ನೆಲ್ಲ ಧ್ವಂಸ ಮಾಡಿರುವ ಮೋದಿ ಸರ್ಕಾರವು ಜನರನ್ನು ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಅಗ್ಗದ ಕೂಲಿ ಆಳುಗಳನ್ನು ಒದಗಿಸಲು ಸಂಚು ರೂಪಿಸಿದೆ. ಅದರ ಪ್ರತಿ ಫಲವೆ ಈ ಹೊಸ ಕಾಯ್ದೆ ಎಂದು ದೂರಿದರು.
ಮನುಸ್ಮೃತಿಯು ಮಹಿಳೆಯರು, ದಲಿತರು ಹಾಗೂ ಶೂದ್ರರ ಕೈಯಲ್ಲಿ ಹಣ ಇರಬಾರದು ಹಾಗೂ ಅವರು ಸಂಪೂರ್ಣ ಸೇವಕರಾಗಿ ಇರಬೇಕೆಂದು ಹೇಳುತ್ತದೆ. ಕೇಂದ್ರ ಸರ್ಕಾರವು ಮನುಸ್ಮೃತಿಯಿಂದ ಪ್ರೇರಣೆ ಪಡೆದ ಆರ್.ಎಸ್.ಎಸ್ ನಿಂದ ಮಾರ್ಗದರ್ಶನ ಪಡೆಯುತ್ತಿರುವುದರಿಂದ ಇಂತಹ ದೇಶ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರವು ಜನರು ಎಲ್ಲಿ ದಂಗೆ ಏಳುತ್ತಾರೋ ಎಂದು ಹೆದರಿ ಪ್ರತಿ ದಿನವೂ ಹೊಸ ಹೊಸ ಸುಳ್ಳುಗಳನ್ನು ಹೆಣೆಯುವ ಕೆಲಸ ಮಾಡುತ್ತಿದೆ. ತಮ್ಮ ಕುರುಡು ಹಿಂಬಾಲಕರ ಸೋಷಿಯಲ್ ಮೀಡಿಯಾಗಳಲ್ಲಿ ಈ ಯೋಜನೆಯ ಕುರಿತು ಸುಳ್ಳು ಸುಳ್ಳೆ ಭ್ರಮೆಗಳನ್ನು ಹುಟ್ಟಿಸಲು ಪ್ರಯತ್ನಿಸುತ್ತಿದೆ. ಆದರೆ, ಜನರು ಗೋವಿನ ಮುಖದಲ್ಲಿರುವ ಗೋಮುಖ ವ್ಯಾಘ್ರತನವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಹಿಂದೆ ರೈತರ ಆಂದೋಲನ ನಡೆದ ಮಾದರಿಯಲ್ಲೆ ಈ ದುಷ್ಟ ಕಾನೂನಿನ ವಿರುದ್ಧವೂ ಆಂದೋಲನ ಪ್ರಾರಂಭವಾಗಲಿದೆ. ಹಿಂದೆ ಉತ್ತರ ಭಾರತದ ರೈತರು ಮಾತ್ರ ಬೀದಿಗಿಳಿದಿದ್ದರು. ಈಗ ರೈತರ ಜೊತೆಯಲ್ಲಿ ಗ್ರಾಮೀಣ ಕೂಲಿಕಾರರು, ಮಹಿಳೆಯರು ಬೀದಿಗೆ ಇಳಿಯಲು ಸಜ್ಜಾಗಿದ್ದಾರೆ. ಇದನ್ನು ಆದಷ್ಟು ಶೀಘ್ರ ಮೋದಿ ಸರ್ಕಾರವು ಅರ್ಥ ಮಾಡಿಕೊಂಡು ಮೊದಲಿದ್ದ ಮನರೇಗಾ ಕಾಯ್ದೆಯನ್ನು ಇನ್ನಷ್ಟು ಸಶಕ್ತಗೊಳಿಸುವ ಮೂಲಕ ಮರುಜಾರಿಗೊಳಿಸಬೇಕು. ಈ ಹೊಸ ಕಾಯ್ದೆಯನ್ನು ರದ್ದು ಮಾಡಬೇಕೆಂದು ನಮ್ಮ ಸರ್ಕಾರವು ಆಗ್ರಹಿಸುತ್ತದೆ ಎಂದರು.

