ಬೆಂಗಳೂರು: ಲಕ್ಷಾಂತರ ರೂಪಾಯಿ ವೆಚ್ಚದ ಅಂಗಾಂಗ ಕಸಿ ಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ನಾವು ಸಾಮಾನ್ಯ ಜನರ ಪ್ರಾಣ ಉಳಿಸುವ ‘ಸಂಜೀವಿನಿ’ಯನ್ನು ನಿರ್ಮಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಡವರ ಪಾಲಿಗೆ ಆಶಾಕಿರಣವಾಗುವಂತಹ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ಆವರಣದಲ್ಲಿ, ಸುಮಾರು 1,000 ಕೋಟಿ ರೂ. ವೆಚ್ಚದ 1,000 ಹಾಸಿಗೆಗಳ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಅಜೀಂ ಪ್ರೇಮ್‌ಜೀ ಫೌಂಡೇಶನ್ ಜೊತೆ ಕೈಜೋಡಿಸಲಾಗಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದರು.
ಈ ಯೋಜನೆಗಾಗಿ ಸರ್ಕಾರವು 10 ಎಕರೆ ಜಾಗವನ್ನು ನೀಡುತ್ತಿದ್ದು, ಆಸ್ಪತ್ರೆಯ ಸಂಪೂರ್ಣ ನಿರ್ಮಾಣ ಹಾಗೂ ಮುಂದಿನ ನಿರ್ವಹಣಾ ವೆಚ್ಚವನ್ನು ಅಜೀಂ ಪ್ರೇಮ್‌ಜೀ ಫೌಂಡೇಶನ್ ಭರಿಸಲಿದೆ. ಅಂಗಾಂಗ ಕಸಿ ಚಿಕಿತ್ಸೆಗಾಗಿಯೇ ಮೀಸಲಾದ ಈ ಬೃಹತ್ ಸಂಕೀರ್ಣದಲ್ಲಿ ಶೇ. 70ರಷ್ಟು ಬೆಡ್‌ಗಳು ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆಗಾಗಿ ಲಭ್ಯವಿರಲಿವೆ. ಯಕೃತ್ (Liver), ಮೂತ್ರಪಿಂಡ (Kidney), ಹೃದಯ ಹಾಗೂ ಶ್ವಾಸಕೋಶದಂತಹ ಸಂಕೀರ್ಣ ಮತ್ತು ದುಬಾರಿ ಚಿಕಿತ್ಸೆಗಳು ಇನ್ನು ಸಾಮಾನ್ಯ ಜನರಿಗೂ ಸುಲಭವಾಗಿ ಸಿಗಲಿವೆ ಎಂದರು.
ದುಬಾರಿ ವೆಚ್ಚದ ಕಾರಣಕ್ಕೆ ಬಡವರು ಚಿಕಿತ್ಸೆಯಿಂದ ವಂಚಿತನಾಗಬಾರದು ಎಂಬುದು ನಮ್ಮ ಸರ್ಕಾರದ ಪರಮೋದ್ದೇಶ. ಹಣದ ಕೊರತೆಯಿಂದ ಕಣ್ಣೀರು ಹಾಕುವ ಸಾವಿರಾರು ಕುಟುಂಬಗಳಿಗೆ ಈ ಆಸ್ಪತ್ರೆ ಹೊಸ ಬದುಕಿನ ಭರವಸೆ ನೀಡಲಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಅಂಗಾಂಗ ಕಸಿ ಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ನಾವು ಸಾಮಾನ್ಯ ಜನರ ಪ್ರಾಣ ಉಳಿಸುವ ‘ಸಂಜೀವಿನಿ’ಯನ್ನು ನಿರ್ಮಿಸುತ್ತಿದ್ದೇವೆ ಎಂದರು.
ಬಡತನವು ಎಂದಿಗೂ ಗುಣಮಟ್ಟದ ಚಿಕಿತ್ಸೆಗೆ ಅಡ್ಡಿಯಾಗಬಾರದು ಎನ್ನುವ ಮಾನವೀಯ ಕಾಳಜಿಯ ಈ ಯೋಜನೆ, ಲಕ್ಷಾಂತರ ಜನರ ಬಾಳಿನಲ್ಲಿ ಬೆಳಕು ಮೂಡಿಸಲಿದೆ. ಸುಸಜ್ಜಿತ ಸೌಲಭ್ಯ, ಪರಿಣಿತ ವೈದ್ಯರು ಮತ್ತು ಉಚಿತ ಸೇವೆಯ ಮೂಲಕ ಬೆಂಗಳೂರನ್ನು ದೇಶದಲ್ಲೇ ನಂ.01 ವೈದ್ಯಕೀಯ ಸೇವೆ ಸಿಗುವ ನಗರವಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

