ಬೆಂಗಳೂರು: ಸುಜಾತ ಮತ್ತು ಅವರ ಕುಟುಂಬದವರನ್ನು ಬಂಧಿಸಿ ಕರೆದೊಯ್ಯುವ ಸಂದರ್ಭದಲ್ಲಿ ಆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದು ಖಂಡನೀಯ. ಇದರಲ್ಲೂ ರಾಜಕಾರಣ ಬೆರೆಸದೇ ಆ ದಲಿತ ಮಹಿಳೆಗೆ ನ್ಯಾಯ ಕೊಡುವ ಕಾರ್ಯ ಮಾಡಬೇಕು. ಅದು ಬಿಜೆಪಿ ಕಾರ್ಯಕರ್ತರಾದರೂ ಆಗಲಿ; ಯಾರಾದರೂ ಆಗಲಿ. ಮಹಿಳೆ ಮಹಿಳೆಯೇ; ಅದರಲ್ಲೂ ಅವರೊಬ್ಬ ದಲಿತ ಮಹಿಳೆ,ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,ಹುಬ್ಬಳ್ಳಿಯಲ್ಲಿ ಇಡೀ ರಾಜ್ಯವೇ ತಲೆತಗ್ಗಿಸುವಂಥ ಒಂದು ಘಟನೆ ನಡೆದಿದೆ. ಸುಜಾತ ಎಂಬ ಬಿಜೆಪಿ ಕಾರ್ಯಕರ್ತೆ ಎಸ್‍ಐಆರ್ (ಮತದಾರರ ವಿಶೇóಷ ಪರಿಷ್ಕರಣೆ) ಮ್ಯಾಪಿಂಗ್ ಸಂದರ್ಭದಲ್ಲಿ ಬ್ಲಾಕ್ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಹೋಗುತ್ತಿರುವಾಗ ಬಿಎಲ್‍ಎ 2 ಹೋಗಲು ಅವಕಾಶ ಇದೆ. ಅಂಥ ಸಂದರ್ಭದಲ್ಲಿ ಸುನಂದಾ ಎಂಬ ಕಾಂಗ್ರೆಸ್ ಕಾರ್ಪೊರೇಟರ್ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ, ಬಳಿಕ ನಮ್ಮ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಹಿನ್ನೆಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಕಾಂಗ್ರೆಸ್ಸಿಗರ ಮಾತು ಕೇಳಿಕೊಂಡು ಅವರ ಮನೆಗೆ ನುಗ್ಗಿ ಅವರೆಲ್ಲರನ್ನೂ ಬಂಧಿಸಿದ್ದಾರೆ.ಕಾಂಗ್ರೆಸ್ ಪುಡಾರಿಗಳ ಮಾತನ್ನು ಕಟ್ಟಿಕೊಂಡು ಆ ದಲಿತ ಹೆಣ್ಮಗಳು, ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದಾರೋ, ವಿವಸ್ತ್ರಗೊಳಿಸಿದ್ದಾರೋ, ಆ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತಿಸಿದ್ದಾರೆ. ಪೊಲೀಸರು ಕಾಂಗ್ರೆಸ್ಸಿನ ಏಜೆಂಟರಂತೆ ವರ್ತಿಸುತ್ತಿದ್ದಾರೆ. 140 ಶಾಸಕರಿದ್ದಾರೆ ಎಂದು ಕಾಂಗ್ರೆಸ್ ಸರಕಾರ ಅಹಂಕಾರದಿಂದ ನಡೆದುಕೊಳ್ಳುತ್ತಿದೆ. ಬಳ್ಳಾರಿ, ಹುಬ್ಬಳ್ಳಿ, ಬೀದರ್‍ನ ಘಟನೆಗಳನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಜನರು ಹಿಡಿಶಾಪ ಹಾಕುತ್ತಿದ್ದಾರೆ. ಜನರು ಯಾವಾಗ ಉತ್ತರ ಕೊಡಬೇಕೋ ಆಗ ಉತ್ತರ ಕೊಡುತ್ತಾರೆ ಎಂದರು.
ಗೃಹ ಸಚಿವರು ಒಂದು ರೀತಿ ಅಸಹಾಯಕರಾಗಿದ್ದಾರೆ. ಅವರಿಗೆ ಇನ್ನೂ ಕೂಡ ಇದರ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅಸಮರ್ಥರೆಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ. ಡಾ. ಬಾಬಾ ಸಾಹೇಬ ಅಂಬೇಡ್ಕರರ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ಅವರು ಇದರಲ್ಲೂ ರಾಜಕಾರಣ ಬೆರೆಸದೇ ಆ ದಲಿತ ಮಹಿಳೆಗೆ ನ್ಯಾಯ ಕೊಡುವ ಕಾರ್ಯ ಮಾಡಬೇಕು.ಮುಖ್ಯಮಂತ್ರಿಗಳು ತಕ್ಷಣ ಇಂಥ ನಾಲಾಯಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

