Sat. Jun 6th, 2026

ಜಿಬಿಎ ಚುನಾವಣೆಯಲ್ಲಿ ಜನರೇ ರಸ್ತೆ ಗುಂಡಿಗಳಲ್ಲಿ ಕಾಂಗ್ರೆಸ್ಸನ್ನು ಹಾಕಿ ಮುಚ್ಚುತ್ತಾರೆ:ಛಲವಾದಿ ನಾರಾಯಣಸ್ವಾಮಿ

Share this with Friends

ಬೆಂಗಳೂರು: ಯಾವಾಗ ಜಿಜಿಎ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಿದೆ, ರಸ್ತೆ ಗುಂಡಿ ಮುಚ್ಚದ ಕಾಂಗ್ರೆಸ್ ಅನ್ನು ಚುನಾವಣೆ ವೇಳೆ ಜನರೇ ಗುಂಡಿಗಳಲ್ಲಿ ಕಾಂಗ್ರೆಸ್ಸನ್ನು ಹಾಕಿ ಮುಚ್ಚುವ ಕಾಲ ಬಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜ್ಯಪಾಲರನ್ನು ಇಂದು ಭೇಟಿ ಮಾಡಿದ ಬಳಿಕ ಲೋಕಭವನದ ಮುಂಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಿಬಿಎ ಚುನಾವಣೆಗೆ ನಾವು ಯಾವಾಗಲೂ ಸಿದ್ಧ. ಇವರು ಬೆಂಗಳೂರನ್ನು ಯಾವ ಮಟ್ಟಕ್ಕೆ ಹಾಳು ಮಾಡಿದ್ದಾರೆಂದು ನಿಮಗೂ ಗೊತ್ತಿದೆ. ಮಳೆ ಬಂದರೆ ದೋಣಿಯಲ್ಲಿ ಓಡಾಡುವ ಪರಿಸ್ಥಿತಿ ಇದೆ. ರಸ್ತೆ ಗುಂಡಿಗಳನ್ನು ಮುಚ್ಚಲಾರದ ಪರಿಸ್ಥಿತಿ ಇದೆ. ಈಗ ಜನರೇ ಗುಂಡಿಗಳಲ್ಲಿ ಕಾಂಗ್ರೆಸ್ಸನ್ನು ಹಾಕಿ ಮುಚ್ಚುವ ಕಾಲ ಬಂದಿದೆ ಎಂದು ತಿಳಿಸಿದರು. ಈ ಬಾರಿ ಚುನಾವಣೆಯಲ್ಲಿ ಗುಣಿಯಲ್ಲೇ ಜನರು ಕಾಂಗ್ರೆಸ್ಸನ್ನು ಮುಚ್ಚುತ್ತಾರೆಂದು ನನಗೆ ಅನಿಸುತ್ತದೆ. ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದು ನುಡಿದರು.

ನಾವೆಲ್ಲರೂ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ದೇವೆ. ಕೆಲವರಿಗೆ ಸುಣ್ಣ- ಇನ್ನೂ ಕೆಲವರಿಗೆ ಬೆಣ್ಣೆ ಇಡುವ ಕೆಲಸವನ್ನು ಈ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಎಲ್ಲ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದರು.

ಕೋಗಿಲು ಅಕ್ರಮ ಗುಡಿಸಲುಗಳನ್ನು ಕೆಡಹಿದ ವಿಚಾರದಲ್ಲಿ ಶಾಸಕ ವಿಶ್ವನಾಥ್ ಅವರು ಸತ್ಯಶೋಧನಾ ಸಮಿತಿ ರಚನೆ ಮಾಡಿ ಅವರ ನೇತೃತ್ವದಲ್ಲಿ ಅಲ್ಲಿ ನಡೆದ ಘಟನೆಗಳನ್ನು ಪಟ್ಟಿ ಮಾಡಿ ನೀಡಿದ್ದು, ಅದನ್ನು ಗೌರವಾನ್ವಿತ ರಾಜ್ಯಪಾಲರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು. ಸರಕಾರವು ಅಕ್ರಮ ಮನೆಗಳನ್ನು ಕೆಡವಿದೆ. ಸರಿ ಇಲ್ಲ ಎಂಬ ಕಾರಣಕ್ಕೆ ತೆರವು ಕಾರ್ಯ ನಡೆಸಿದ್ದಾರೆ. ಅವರು ಅಕ್ರಮವಾಸಿಗಳಾಗಿರುವಾಗ ಇನ್ನೊಂದು ಕಡೆ ಮನೆ ಕೊಡುವುದು ತಪ್ಪಲ್ಲವೇ?ಈ ವಿಷಯದಲ್ಲಿ ಸರಕಾರದ ತಪ್ಪಿದೆ ಎಂದು ಪ್ರತಿಪಾದಿಸಿದರು.

ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯವರ ವಿರುದ್ಧ ಷಡ್ಯಂತ್ರಗಳು ನಡೆದಿವೆ; ಅಲ್ಲಿ ಕಾಂಗ್ರೆಸ್ಸಿನ ರಾಜಶೇಖರ್ ಎಂಬ ವ್ಯಕ್ತಿಯನ್ನು ಅವರೇ ಕೊಲೆ ಮಾಡಿರುವುದು; ಭರತ್ ರೆಡ್ಡಿಯವರ ಗನ್‍ಮ್ಯಾನ್‍ಗಳು ಇದನ್ನು ಮಾಡಿದ್ದಾರೆ. ಆದರೆ, ಅದು ಕೊಲೆ ಆಗಿದ್ದರೂ ಅವರ್ಯಾರನ್ನೂ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು.

ಎಂಥ ವಿಚಿತ್ರ ಧೋರಣೆ?

ಅಲ್ಲಿ ಕೊಲೆಗೆ ಬಂಧನ ನಡೆದಿಲ್ಲ; ಹುಬ್ಬಳ್ಳಿಯಲ್ಲಿ ಒಬ್ಬರು ಹೆಣ್ಮಗಳನ್ನು ವಿವಸ್ತ್ರಗೊಳಿಸಿ ಮತ್ತೆ ಅವರ ಮೇಲೆ ಕೊಲೆ ಪ್ರಯತ್ನದ 109 ಸೆಕ್ಷನ್ ಅಡಿ ಕೇಸ್ ಹಾಕಿದ್ದಾರೆ. ಆಕೆ ಏನೂ ಮಾಡದೇ 109, ಇಲ್ಲಿ ಕೊಲೆ ಆದರೂ ಇದುವರೆಗೂ ಅವರ ಮೇಲೆ ಕೇಸೂ ಇಲ್ಲ; ಬಂಧನವೂ ಆಗಿಲ್ಲ ಎಂದು ಟೀಕಿಸಿದರು. ಎಂಥ ವಿಚಿತ್ರ ಧೋರಣೆಯನ್ನು ಈ ಸರಕಾರ ಹೊಂದಿದೆ ಎಂದು ಆಕ್ಷೇಪಿಸಿದರು.

5 ನಿಮಿಷದಲ್ಲಿ ನಾನು ಜನಾರ್ಧನ ರೆಡ್ಡಿ ಮನೆಯನ್ನು ಸುಟ್ಟು ಬಿಸಾಕುತ್ತೇನೆ ಎಂದು ಭರತ್ ರೆಡ್ಡಿಯವರು ಹೇಳುತ್ತಾರೆ. ಇದು ದ್ವೇಷ ಭಾಷಣ ಅಲ್ಲವೇ?.ದ್ವೇಷ ಭಾಷಣ ಮಸೂದೆ ತಂದಿದ್ದೀರಿ. ಆದರೆ, ಅವರ ಮೇಲೆ ಕ್ರಮ ಯಾಕಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇವತ್ತಲ್ಲ; ನಾಳೆಯಾದರೂ ಸರಿ; ಅವರನ್ನು ಮುಗಿಸುವವರೆಗೆ ನಾನು ನಿದ್ದೆ ಮಾಡುವುದಿಲ್ಲ ಎಂದು ಶಾಸಕ ಮಾತನಾಡುವಾಗ ನೀವು ಕೇಸ್ ಹಾಕಬೇಕೇ ಬೇಡವೇ ಎಂದು ಕೇಳಿದರು. ಅವರ ಮೇಲೆ ಕೇಸ್ ಹಾಕಬೇಕೇ ಬೇಡವೇ? ಅವರ ಮೇಲೆ ಕೇಸೇ ಇಲ್ಲ. ನಮ್ಮ ಕಾರ್ಯಕರ್ತರು, ನಮ್ಮ ನಾಯಕರ ಮೇಲೆ ಎಫ್‍ಐಆರ್ ಹಾಕಿದ್ದಾರೆ ಎಂದು ದೂರಿದರು.

ಅವರಿಗೆ ಬೇಕಾದವರನ್ನು ಬಿಡಿಸಲು ಮತ್ತು ತಪ್ಪಿಸಲು ಏನು ಮಾಡಬೇಕೋ ಅಂಥ ಕೆಲಸ ಮಾಡುತ್ತಾರೆ. ಇನ್ನೊಂದು ಕಡೆ ನಮ್ಮ ಕಾರ್ಯಕರ್ತರು, ನಮ್ಮ ನಾಯಕರಿಗೆ ಯಾವ ರೀತಿ ಶಿಕ್ಷೆ ಕೊಡಬೇಕೋ ಆ ಯೋಚನೆ ಮಾಡುತ್ತಾರೆ ಎಂದು ತಿಳಿಸಿದರು. ಸರಕಾರ ತಪ್ಪು ಮಾಡುತ್ತಿದೆ. ಆದ್ದರಿಂದ ಈ ಮಸೂದೆಗೆ ಅಂಕಿತ ನೀಡಬಾರದಂದು ಮನವಿ ಮಾಡಿದ್ದಾಗಿ ವಿವರಿಸಿದರು.


Share this with Friends

Related Post