Fri. Mar 6th, 2026

ಉತ್ತರ‌ ಕರ್ನಾಟಕದಲ್ಲಿ ವಾಕ್ ಶ್ರಮಣ ಸಂಸ್ಥೆ ಘಟಕ ಸ್ಥಾಪಿಸಿ: ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಮನವಿ

Share this with Friends

ಬೆಂಗಳೂರು:ಪ್ರಾದೇಶಿಕ ಅಸಮಾನತೆಗಳನ್ನು ಪರಿಹರಿಸಲು ಉತ್ತರ ಕರ್ನಾಟಕದಲ್ಲಿ ಮೈಸೂರಿನ ವಾಕ್ ಶ್ರಮಣ ಸಂಸ್ಥೆಯ ಘಟಕದ ತರಹದ ಸಂಸ್ಥೆಯನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದಲ್ಲಿ ರಾಜ್ಯ ಸರ್ಕಾರ ಅಗತ್ಯ ಭೂಮಿ ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವರಾದ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯ 60 ನೇ ಕೌನ್ಸಿಲ್ ಸಭೆಯಲ್ಲಿ ವಿಕಾಸಸೌಧದಿಂದ ವರ್ಚುವಲ್ ಮೂಲಕ ಭಾಗವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವದಿನೇಶ್ ಗುಂಡೂರಾವ್ ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳ ಕುರಿತು ಪ್ರಸ್ತಾಪ ಮಾಡಿದರು.

ಉತ್ತರ ಕರ್ನಾಟಕದಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ತರಹದ ಸಂಸ್ಥೆಯನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆಯನ್ನು ನೀಡಬೇಕು.ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಘಟಕಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಬೇಕು. ಈ ಸಂಸ್ಥೆಯು ವಾಕ್ ಮತ್ತು ಶ್ರವಣ ವಿಜ್ಞಾನಗಳಲ್ಲಿ ತರಬೇತಿ, ಸೇವಾ ವಿತರಣೆ ಮತ್ತು ಸಂಶೋಧನೆಗಾಗಿಯೇ ಇರಬೇಕು. ಇದರಿಂದ ಮೈಸೂರಿನ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆ ಭಾಗದಿಂದ ಮೈಸೂರಿಗೆ ಚಿಕಿತ್ಸೆಗೆ ಬರಬೇಕಾದವರಿಗೆ ಆಗುತ್ತಿರುವ ಸಮಸ್ಯೆಯೂ ತಪ್ಪುತ್ತದೆ ಎಂದರು.

ಔಟ್‌ರೀಚ್ ಸೆಂಟರ್‌ಗಳ ಸ್ಥಾಪನೆ:

ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಯ್ದ ಜಿಲ್ಲಾ/ತಾಲೂಕಾ ಆಸ್ಪತ್ರೆಗಳ ಮೂಲಕ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಈ ಕೇಂದ್ರಗಳು ಸ್ಕ್ರೀನಿಂಗ್, ಫಾಲೋ-ಅಪ್ ಮತ್ತು ಚಿಕಿತ್ಸಾ ಸೇವೆಗಳನ್ನು ಸುಗಮಗೊಳಿಸಲು ಅನುಕೂಲವಾಗುತ್ತದೆ. ಇವುಗಳು ಮೈಸೂರು AIISH ಗೆ ಸಂಪರ್ಕ ಹೊಂದಿದ ಸ್ಥಳೀಯ ತರಬೇತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ.ಕರ್ನಾಟಕದಲ್ಲಿ ರಾಜ್ಯ ಕಾಕ್ಲಿಯರ್ ಇಂಪ್ಲಾಂಟ್ ಕಾರ್ಯಕ್ರಮವನ್ನು ಬಲಪಡಿಸಲು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು

(AIISH) ತಾಂತ್ರಿಕ ಮಾರ್ಗದರ್ಶನ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ 50:50 ವೆಚ್ಚ ಹಂಚಿಕೆ ಮೂಲಕ ಇದಕ್ಕೆ ಅನುವು ಮಾಡಿಕೊಡಬೇಕು ಎಂದರು.

ಅಲ್ಪಾವಧಿಯ ಕೋರ್ಸ್‌ಗಳ ಪರಿಚಯ:

ಪ್ರಸ್ತುತ ಸೇವೆಯಲ್ಲಿರುವ ಆರೋಗ್ಯ ಸಿಬ್ಬಂದಿಗಾಗಿ 3 ರಿಂದ 6 ತಿಂಗಳ ಅಲ್ಪಾವಧಿಯ ತರಬೇತಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪರಿಚಯಿಸಲು ಅನುಮೋದನೆ ನೀಡಬೇಕು. ಈ ಕೋರ್ಸ್‌ಗಳನ್ನು AIISH ಮೈಸೂರು ಅಥವಾ ಜಿಲ್ಲಾ ಮಟ್ಟದ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ AIISH ಶೈಕ್ಷಣಿಕ ಸಹಯೋಗದೊಂದಿಗೆ ನಡೆಸಬಹುದು. ಇದು ಮಕ್ಕಳಲ್ಲಿ ಸ್ಕ್ರೀನಿಂಗ್, ಆರಂಭಿಕ ಗುರುತಿಸುವಿಕೆ, ಮಾತು ಮತ್ತು ಶ್ರವಣ ಸಮಸ್ಯೆ ಗುರುತಿಸುವಿಕೆ ಮತ್ತು ಶ್ರವಣೇಂದ್ರಿಯ ಚಿಕಿತ್ಸೆ (AVT) ಮೇಲೆ ಗಮನ ಹರಿಸಬೇಕು.

ಎನ್ ಜಿಒಗಳ ಮೂಲಕ ತಾಯಿ ಮತ್ತು ಮಕ್ಕಳ ತರಬೇತಿ ಕೇಂದ್ರಗಳ ಸ್ಥಾಪನೆ:

ಕರ್ನಾಟಕ ಸರ್ಕಾರದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಮನ್ವಯದೊಂದಿಗೆ ಎನ್‌ಜಿಒಗಳ ಬೆಂಬಲದೊಂದಿಗೆ ಜಿಲ್ಲಾ ಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಈ ಕೇಂದ್ರಗಳು ಅಸ್ತಿತ್ವದಲ್ಲಿರುವ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಮೂಲಕ AVT ಮತ್ತು ವಾಕ್ ಚಿಕಿತ್ಸೆ, ಪೋಷಕರ ಸಲಹೆ ಮತ್ತು ಶ್ರವಣ ಮತ್ತು ನರ ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಆರೈಕೆದಾರರ ತರಬೇತಿ ಸೇರಿದಂತೆ ಆರಂಭಿಕ ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವರಿಗೆ ಹೇಳಿದರು.

ಇದಕ್ಕೆ ಕೇಂದ್ರ ಸಚಿವರು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಿಕೊಡಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.


Share this with Friends

Related Post