Fri. Mar 6th, 2026

ನಿತಿನ್ ನಬಿನ್ ಆಯ್ಕೆ: ಬಿಜೆಪಿ ರಾಜ್ಯ ಕಾರ್ಯಾಲಯದ ಬಳಿ ಸಂಭ್ರಮಾಚರಣೆ

Share this with Friends

ಬೆಂಗಳೂರು: ನಿತಿನ್ ನಬಿನ್ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿಯುಕ್ತಿಗೊಂಡು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಬಳಿ ರಾಜ್ಯ ಬಿಜೆಪಿವತಿಯಿಂದ ಸಂಭ್ರಮಾಚರಣೆಯನ್ನು ನಡೆಸಲಾಯಿತು.

ಮಲ್ಲೇಶ್ವರದಲ್ಲಿರುವ ಜಗನ್ನಾಥಭವನದ ಬಳಿ ಸೇರಿದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು‌ಭಾರತ ಮಾತೆಗೆ, ಬಿಜೆಪಿ, ನಿತಿನ್ ನಬಿನ್, ಯಡಿಯೂರಪ್ಪ ಪರ ಜೈಕಾರ ಕೂಗಿದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ಇನ್ನು ನೂತನ‌ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಜಯೇಂದ್ರ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ನಿತಿನ್ ನಬೀನ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.ತಮ್ಮ ನಾಯಕತ್ವದಲ್ಲಿ ಸಂಘಟನೆಯ ವಿಜಯದ ಪಥವನ್ನು ಮತ್ತಷ್ಟು ವಿಸ್ತರಿಸಲು ನಾವು ಶಕ್ತಿಮೀರಿ ಶ್ರಮಿಸುವ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ತಮ್ಮ ಸೈದ್ಧಾಂತಿಕ ಬದ್ಧತೆ,  ಕ್ರಿಯಾಶೀಲ ನಾಯಕತ್ವ, ಸುದೀರ್ಘ ರಾಜಕೀಯ ಅನುಭವ ಹಾಗೂ ತಲಸ್ಪರ್ಶಿ ಸಂಘಟನಾ ಸಾಮರ್ಥ್ಯವು ಪಕ್ಷವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂಬ ಅಚಲ ವಿಶ್ವಾಸ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಇದೆ. ತಮ್ಮ ದಕ್ಷ ನಾಯಕತ್ವದಲ್ಲಿ ಸಂಘಟನೆಗೆ ಹೊಸ ವೇಗ, ಕಾರ್ಯಕರ್ತರಿಗೆ ಹೊಸ ಉತ್ಸಾಹ ಮೂಡಿದೆ ಎಂದು ತಿಳಿಸಿದ್ದಾರೆ.

ನಮ್ಮ ಎಲ್ಲ ಹಿರಿಯ ನಾಯಕರ ಬೆಂಬಲದೊಂದಿಗೆ, ದೇಶದ ಏಳಿಗೆಯ ಗುರಿಯೆಡೆಗೆ ಪಕ್ಷವನ್ನು ತಾವು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸ ನಮ್ಮೆಲ್ಲರಿಗೆ ಇದೆ. ರಾಜ್ಯದ ಸಮಸ್ತ ಕಾರ್ಯಕರ್ತರ ಪರವಾಗಿ ತಮಗೆ ಹೆಮ್ಮೆಯ ಶುಭಹಾರೈಕೆಗಳು ಎಂದು ತಿಳಿಸಿದ್ದಾರೆ.

ಶುಭ ಕೋರಿದ ಬೊಮ್ಮಾಯಿ:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋದವಾಗಿ ಆಯ್ಕೆಯಾಗಿದ್ದು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ, ಪಕ್ಷ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಯುವ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಹಾಗೂ ನಿರ್ಗಮಿತ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವನ್ನು ನೂತನ ಅಧ್ಯಕ್ಷರಾದ ನಿತಿನ್ ನಬಿನ್ ಅವರು  ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.


Share this with Friends

Related Post