ಬೆಂಗಳೂರು: ರಾಜ್ಯಪಾಲರ ಮೂಲಕ ವಿಬಿ ಜಿ ರಾಮ್ ಜಿ ಯೋಜನೆ ಸಂಬಂಧ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಜನರನ್ನು ಎತ್ತಿಕಟ್ಟುವಂಥ ಕುತಂತ್ರ, ಷಡ್ಯಂತ್ರಕ್ಕೆ ಕಾಂಗ್ರೆಸ್ಸಿಗರು ಕೈ ಹಾಕಿದ್ದರು ಆದರೆ ಅದಕ್ಕೆ ರಾಜ್ಯಪಾಲರು ಅವಕಾಶ ನೀಡಿಲ್ಲ ಎಂದು ರಾಜ್ಯಪಾಲರ ಇಂದಿನ ನಡೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಉದ್ಯೋಗ ಖಾತ್ರಿ ಯೋಜನೆ ಇರುವುದು ಕಾಂಗ್ರೆಸ್ ಪುಡಾರಿಗಳಿಗಾಗಿ ಎಂದು ಭಾವಿಸಿದಂತಿದೆ. ನರೇಂದ್ರ ಮೋದಿಯವರು ಸಾಕಷ್ಟು ಸುಧಾರಣೆಗಳೊಂದಿಗೆ ಕಾಯ್ದೆ ತಂದಿದ್ದು, ಅದನ್ನು ವಿರೋಧಿಸಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ರಾಜ್ಯಪಾಲರ ಭಾಷಣ ಸಿದ್ದಪಡಿಸಲಾಗಿತ್ತು.ರಾಜ್ಯ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಸದನವನ್ನು ಬಳಸುತ್ತಿರುವುದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.
ಸದನದ ಒಳಗಡೆ ರಾಜ್ಯಪಾಲರಿಗೆ ಅಗೌರವ ಸೂಚಿಸುವ ಕೆಲಸವನ್ನು ಆಡಳಿತ ಪಕ್ಷದವರು ಮಾಡಿದ್ದು ಖಂಡನಾರ್ಹ. ಈ ಕಾಂಗ್ರೆಸ್ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೆಲಸ ಮಾಡಿದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ದಾರಿಯಲ್ಲಿ ರಾಜ್ಯ ಸರಕಾರ ಸಾಗುತ್ತಿದೆ. ಸದನದ ದುರ್ಬಳಕೆಯನ್ನೂ ರಾಜ್ಯ ಸರಕಾರ ಮಾಡಲು ಹೊರಟಿರುವುದು ದುರ್ದೈವ ಎಂದು ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರಕಾರವು ಮನ್ ರೇಗಾದಲ್ಲಿ ವಿಬಿ ಜಿ ರಾಮ್ ಜಿ ಎಂದು ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ. ಸುಧಾರಣೆಗಳನ್ನು ತಂದಿದ್ದಾರೆ. ಅದರ ವಿರುದ್ಧ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಪಪ್ರಚಾರಗಳನ್ನು ಪ್ರಾರಂಭಿಸಿದೆ.
ಪಾಪ, ಕಾಂಗ್ರೆಸ್ಸಿನವರು ಗೊಂದಲದಲ್ಲಿದ್ದಾರೆ. ಗ್ರಾಮೀಣ ಭಾಗದ ಬಡವರು, ಸಣ್ಣ ರೈತರು, ಕಾರ್ಮಿಕರಿಗೆ ಅನುಕೂಲ ಆಗಲೆಂದು ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ. ಕಾಂಗ್ರೆಸ್ ಪುಡಾರಿಗಳಿಗಾಗಿ ಈ ಯೋಜನೆ ಅಲ್ಲ ಎಂದು ಕಿವಿಮಾತು ಹೇಳಿದರು.
ನಡವಳಿಕೆ ಸುಧಾರಣೆ ಮಾಡಿಕೊಳ್ಳದಿದ್ದರೆ:
ಕಾಂಗ್ರೆಸ್ ಸರಕಾರಕ್ಕೆ 140 ಶಾಸಕರ ಬೆಂಬಲ ಇದೆ ಎಂಬ ಕಾರಣಕ್ಕೆ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವು ತಮ್ಮ ನಡವಳಿಕೆ ಸರಿ ಮಾಡಿಕೊಳ್ಳದೇ ಹೋದರೆ, ಒಕ್ಕೂಟದ ವ್ಯವಸ್ಥೆಗೆ ಕಲ್ಲು ಹಾಕುವ ಕೆಲಸವನ್ನು ಸುಧಾರಣೆ ಮಾಡಿಕೊಳ್ಳದೇ ಇದ್ದರೆ 140 ಶಾಸಕರಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ 40ಕ್ಕೆ ಇಳಿಸಬೇಕೆಂದು ಈಗಾಗಲೇ ರಾಜ್ಯದ ಜನರು ಕಾಯುತ್ತಿದ್ದಾರೆ. ಆ ದಿನಗಳೂ ದೂರ ಉಳಿದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಸರಕಾರವು ಸರಿಯಾದ ದಾರಿಯಲ್ಲಿ ಹೋಗಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಉಳಿಸಬೇಕೆಂದು ವಿಜಯೇಂದ್ರ ಆಗ್ರಹಿಸಿದರು.

