ಬೆಂಗಳೂರು: ಅಬಕಾರಿ ಹಗರಣ ಆರೋಪ ಪ್ರಕರಣ ಸಂಬಂಧ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ಅವರ ರಾಜೀನಾಮೆ ಪಡೆಯುವ ನೈತಿಕತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಯೇ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಇದ್ದಾಗ ನೀವೇ ಹೋರಾಟ ಮಾಡಿದ್ದೀರಿ. ಆಗ ನಮ್ಮ ಸಚಿವರಾಗಿದ್ದ ಈಶ್ವರಪ್ಪ ಅವರು ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯನವರು ಆಗ ಆಗ್ರಹ ಪಡಿಸಿದ್ದರು. ಅವರಿಗೆ ಈಗ ಅದೇ ನೈತಿಕತೆ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ರಾಜ್ಯದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರ ಬಗ್ಗೆ ಒಂದು ಆಡಿಯೋ ಬಂದಿದೆ. ಲಕ್ಷ್ಮೀನಾರಾಯಣ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಜಗದೀಶ್ ನಾಯಕ್ ಎಂಬ ಅಧಿಕಾರಿ ಮತ್ತು ಇನ್ನಿಬ್ಬರು 25 ಲಕ್ಷ ಹಣ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ರೆಡ್ ಹ್ಯಾಂಡ್ ಆಗಿ 25 ಲಕ್ಷ ಪಡೆದ ಆ 3 ಜನರನ್ನು ಈಗ ಬಂಧಿಸಲಾಗಿದೆ. ನಾವು ಮಂತ್ರಿಗೂ, ಇಬ್ಬರು ಡಿಸಿಗಳಿಗೆ, ಬೇರೆ ಬೇರೆ ಅಧಿಕಾರಿಗಳಿಗೆ ಹಣ ಕೊಡಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದು ಆಡಿಯೋದಲ್ಲಿದೆ. 2.5 ಕೋಟಿ ಲಂಚದಲ್ಲಿ ಮೊದಲನೇ ಕಂತು 2.5 ಲಕ್ಷ ಕೊಡುವಾಗ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಥರ ಸಾವಿರಾರು ಲೈಸನ್ಸ್‍ಗೆ ಹಣ ಪಡೆದಿದ್ದಾರೆ. ಅಬಕಾರಿ ಇಲಾಖೆ ಲೂಟಿಕೋರ ಇಲಾಖೆಯಾಗಿದೆ ಈಗ ಆರ್.ಬಿ.ತಿಮ್ಮಾಪುರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಗೌರವ ಕೊಡದೇ ಧಿಕ್ಕಾರ ಕೂಗಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ:
ರಾಜ್ಯದ ರಾಜ್ಯಪಾಲರು ಬಂದು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿ ವಾಪಸ್ ತೆರಳುವಾಗ ಗವರ್ನರ್ ಅವರಿಗೆ ಅವಮಾನ ಮಾಡಿದ್ದಾರೆ. ಎರಡೂ ಮನೆಯ ಸದಸ್ಯರಲ್ಲಿ ಕೆಳಮನೆಯ ಪ್ರದೀಪ್ ಈಶ್ವರ್, ಶರತ್ ಬಚ್ಚೇಗೌಡ, ಮೇಲ್ಮನೆಯ ಹಿರಿಯ ಶಾಸಕರ ಪೈಕಿ ರಾಜ್ಯಸಭಾ ಸದಸ್ಯರಾಗಿ 3 ಸಾರಿ ಇದ್ದ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ರವಿ ಅವರು ಅಗೌರವ ತೋರಿ ಅಪಮಾನ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಮೇಲಿನ 4 ಸದಸ್ಯರನ್ನು ಅಮಾನತಿನಲ್ಲಿಡಲು ಆಗ್ರಹಿಸುವುದಾಗಿ ತಿಳಿಸಿದರು.
ಮೇಲ್ಮನೆಯಲ್ಲಿ ಬಿ.ಕೆ.ಹರಿಪ್ರಸಾದ್ ಮತ್ತು ಎಸ್.ರವಿ ಅವರ ಅಮಾನತಿಗೆ ಆಗ್ರಹಿಸಿ ಸದನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಇವರನ್ನು ಅಮಾನತು ಮಾಡುವ ವಿಷಯವನ್ನು ನೀತಿ ನಿರೂಪಣಾ ಸಮಿತಿಗೆ ವಹಿಸಿದ್ದಾರೆ.ಇವರು ಗವರ್ನರ್ ಅವರಿಗೆ ಧಿಕ್ಕಾರ ಕೂಗಿದ್ದಾರೆ. ಇವರಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಕೇಳಿದರು. ಮುಖ್ಯಮಂತ್ರಿಗಳು, ಸ್ಪೀಕರ್, ಸಭಾಪತಿಗಳು, ಕಾನೂನು ಸಚಿವರು- ಹೀಗೆ ಎಲ್ಲರೂ ಸೇರಿ ಕರೆದುಕೊಂಡು ಬಂದಿದ್ದಾರೆ. ಗೌರವ ಕೊಟ್ಟು ಭಾಷಣ ಮಾಡಿಸಿ ಆದ ಬಳಿಕ ವಾಪಸ್ ತೆರಳುವಾಗ ಅದೇ ಗೌರವ ಕೊಡಬೇಕಾದುದು ಸರಕಾರದ ಪ್ರಾಥಮಿಕ ಕರ್ತವ್ಯ. ಆದರೆ, ರಾಜ್ಯಪಾಲರು ವಾಪಸ್ ತೆರಳುವಾಗ ಅಪಮಾನ ಮಾಡಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ. ಇದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಖಂಡಿಸಿದರು.

