ಸ್ವಿಟ್ಜರ್ಲೆಂಡ್:ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಸಮಾವೇಶದಲ್ಲಿ ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಪ್ರಯತ್ನ ಸಫಲವಾಗಿದ್ದು ಕರ್ನಾಟಕಕ್ಕೆ ₹13,070 ಕೋಟಿ ಹೂಡಿಕೆಯ ಒಡಂಬಡಿಕೆಯಾಗಿದೆ,ದಾವೋಸ್ ಪ್ರವಾಸ ಯಶಸ್ವಿಯಾಗಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ದಾವೋಸ್ ಸಮಾವೇಶದ ನಂತರ ಮಾತನಾಡಿದ ಅವರು,ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಸಮಾವೇಶ ದಲ್ಲಿ ಕರ್ನಾಟಕ ಮತ್ತೊಮ್ಮೆ ಜಾಗತಿಕ ಹೂಡಿಕೆದಾರರ ಮನ ಗೆದ್ದಿದೆ.ದಾವೋಸ್ ನ ಜಾಗತಿಕ ವೇದಿಕೆಯಲ್ಲಿ ರಾಜ್ಯ ಹೊಸ ಮುನ್ನಡೆ ಪಡೆದುಕೊಳ್ಳುವಲ್ಲಿ ಸಫಲವಾಗಿದೆ ಎಂದರು.
ವೈಮಾಂತರಿಕ್ಷ, ಆಹಾರ ಸಂಸ್ಕರಣೆ, ಡೇಟಾ ಸೆಂಟರ್ ಗಳು, ಡಿಜಿಟಲ್ ಮೂಲಸೌಕರ್ಯ, ಶುದ್ಧ ಇಂಧನ, ಅತ್ಯಾಧುನಿಕ ತಯಾರಿಕೆ ಸೇರಿದಂತೆ ಹಲವು ಪ್ರಮುಖ ವಲಯಗಳಲ್ಲಿ ಹೂಡಿಕೆ–ವಿಸ್ತರಣೆ–ಪಾಲುದಾರಿಕೆಗಳಿಗೆ ಕರ್ನಾಟಕವು ಮುಂದಿನ ದಶಕದ ಚಿಮ್ಮು ಹಲಗೆಯಾಗಿ ಹೊರಹೊಮ್ಮಿದ್ದು, ₹13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ಅಧಿಕೃತ ಮುದ್ರೆ ದೊರೆತಿದೆ ಎಂದರು.
ಪ್ರಮುಖ ಸಾಧನೆಗಳು
🔹 ₹13,070 ಕೋಟಿ ಹೂಡಿಕೆ ಒಪ್ಪಂದಗಳಿಗೆ ಅಧಿಕೃತ ಮುದ್ರೆ
🔹 ವಿಜಯಪುರ–ಬಳ್ಳಾರಿಯಲ್ಲಿ ₹10,500 ಕೋಟಿ ನವೀಕರಿಸಬಹುದಾದ ಇಂಧನ ಹೂಡಿಕೆ
🔹 ಸ್ನೈಡರ್ ಎಲೆಕ್ಟ್ರಿಕ್ – ₹1,520 ಕೋಟಿ ಹೂಡಿಕೆ
🔹 ನಂಜನಗೂಡಿನಲ್ಲಿ ಕಾರ್ಲ್ಸ್ಬರ್ಗ್ನ ₹350 ಕೋಟಿ ಬಾಟ್ಲಿಂಗ್ ಘಟಕ
🔹 ಕುಷ್ಟಗಿಯಲ್ಲಿ ಐನಾಕ್ಸ್ GFLನ ಪವನ–ಸೌರ ಉತ್ಪಾದನಾ ಘಟಕಗಳು
🔹 ಮೈಸೂರು ಬೆಲ್ರೈಸ್ ಇಂಡಸ್ಟ್ರೀಸ್ ವಿಸ್ತರಣೆ
🔹 ಇಂಪೀರಿಯಲ್ ಕಾಲೇಜ್ – ಕ್ವಿನ್ ಸಿಟಿಯಲ್ಲಿ R&D ಕೇಂದ್ರ
ಕೃತಕ ಬುದ್ಧಿಮತ್ತೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC), ಸಂಶೋಧನೆ ಹಾಗೂ ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ದೇಶದ ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸತತ ಐದು ದಿನಗಳಲ್ಲಿ ನಡೆದ 45ಕ್ಕೂ ಹೆಚ್ಚು ಉನ್ನತ ಮಟ್ಟದ ಸಭೆಗಳು ಸ್ಪಷ್ಟ ಫಲಿತಾಂಶ ನೀಡಿವೆ. ಇವು ಹೊಸ ಬಂಡವಾಳ ಹರಿವಿಗೆ ಬಲ ನೀಡುವುದರ ಜೊತೆಗೆ ಜಾರಿಯಲ್ಲಿರುವ ಯೋಜನೆಗಳಿಗೆ ವೇಗ ತಂದಿವೆ ಎಂದು ಸಚಿವರು ಮಾಹಿತಿ ನೀಡಿದರು.
ನೋಕಿಯಾ, ವಾಸ್ಟ್ ಸ್ಪೇಸ್, ವೊಯೆಜರ್ ಟೆಕ್ನಾಲಜೀಸ್, ಕ್ರೆಸೆಂಟ್ ಎಂಟರ್ಪ್ರೈಸಿಸ್, ಮಿಸ್ಟ್ರಾಲ್ AI, ಫಿಲಿಪ್ ಮಾರಿಸ್, ಭಾರ್ತಿ ಎಂಟರ್ಪ್ರೈಸಸ್, ಟೆಕ್ ಮಹೀಂದ್ರಾ, ಸಿಫಿ ಟೆಕ್ನಾಲಜೀಸ್ ಸೇರಿದಂತೆ ಜಾಗತಿಕ ದೈತ್ಯಗಳು ಕರ್ನಾಟಕದ ಉದ್ಯಮ ಸ್ನೇಹಿ ವಾತಾವರಣ, ಪರಿಣತ ಮಾನವ ಸಂಪನ್ಮೂಲ ಮತ್ತು ದೂರದೃಷ್ಟಿಯ ನೀತಿಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿರುವುದು, ರಾಜ್ಯ ಸರ್ಕಾರದ ದಿಕ್ಕು ಸರಿಯಿದೆ ಎಂಬುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ದೃಢಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

