ಹಾಸನ: ಜೆಡಿಎಸ್ ಪಕ್ಷವನ್ನು ಹಾಸನದಿಂದ ಓಡಿಸಲು ಯಾರಿಗೂ ಸಾಧ್ಯವಿಲ್ಲ, ನಿಮ್ಮೆಲ್ಲರ ಹೃದಯದಲ್ಲಿ ಜೆಡಿಎಸ್ ಶಾಶ್ವತ ಸ್ಥಾನ ಪಡೆದಿದೆ ಎಂದು ಜಾತ್ಯಾತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ 25 ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು,ಜೆಡಿಎಸ್ ಪಕ್ಷವನ್ನು ಹಾಸನದಿಂದ ಓಡಿಸಲು ಯಾರಿಗೂ ಸಾಧ್ಯವಿಲ್ಲ, ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಲು ನಾವೆಲ್ಲರೂ ನಿರಂತರವಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಸನ ಜಿಲ್ಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಜನತಾದಳ ಪಕ್ಷ 25 ವರ್ಷ ಮಾಡಿದ ಸಾಧನೆಯ ಕುರಿತು ವಿವರಿಸಿದರು.
ಈಗಾಗಲೇ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಮೂಲಕ 52 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ನಾನು ಮಾಡಿದ್ದೇನೆ, ಎರಡನೇ ಹಂತದ ಪ್ರವಾಸವನ್ನು ಶೀಘ್ರವಾಗಿ ಆರಂಭಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ 2028ಕ್ಕೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲು ದಿನಕ್ಕೆ 18 ಗಂಟೆ ಕೆಲಸ ಮಾಡೋಣ. ಪಕ್ಷ ಸಂಘಟನೆಗಾಗಿ ನೀವು ರಾಜ್ಯದ ಯಾವುದೇ ಮೂಲೆಗೆ ಕರೆದರು ನಾನು ಬರುತ್ತೇನೆ ಎಂದರು.
ಹೆಚ್.ಡಿ. ದೇವೇಗೌಡರ ಆಶೀರ್ವಾದ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಗದರ್ಶನವಿದ್ದರೆ ಜನತಾದಳ ಪಕ್ಷವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಫಿನಿಕ್ಸ್ ನಂತೆ ಎದ್ದು ಬಂದು ಜನತದಾಳ ಪಕ್ಷವನ್ನು ಕಟ್ಟಿ 2028ಕ್ಕೆ ಅಧಿಕಾರಕ್ಕೆ ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತರೋಣ ಎಂಬ ಸಂಕಲ್ಪ ತೊಟ್ಟರು.
ನಿಖಿಲ್ ಕುಮಾರಸ್ವಾಮಿ ಮುಂದೆ ಏನು ಆಗತ್ತಾನೆ ಎಂಬುದು ತಾಯಿ ಹಾಸನಾಂಬೆಗೆ ಮಾತ್ರ ಗೊತ್ತು:
ನಾನು ಮೂರು ಬಾರಿ ಸೋತಿರಬಹುದು, ನನ್ನ ರಾಜಕೀಯ ಭವಿಷ್ಯವನ್ನ ನಿರ್ಧರಿಸೋದು ಹಾಸನಾಂಬೆ ತಾಯಿ. ನನ್ನ ಮುಂದೆ ಇರೋ ಗುರಿ ಮತ್ತೊಮ್ಮೆ ಕುಮಾರಣ್ಣ ಅವರನ್ನು 2028ಕ್ಕೆ ಮುಖ್ಯಮಂತ್ರಿ ಮಾಡಬೇಕು. ಈ ರಾಜ್ಯವನ್ನು ರಾಮರಾಜ್ಯ ಮಾಡಬೇಕು ಎಂಬ ಕನಸನ್ನು ಹೊಂದಿದ್ದೇನೆ ಎಂದರು.

