ಬೆಂಗಳೂರು:ನೀವು ರಾಜ್ಯಪಾಲರು, ನಮ್ಮ ಪಾಲಿಗೆ ಇದು ರಾಜಭವನವೇ. ನಾವು ರಾಜಭವನಕ್ಕೆ ಗೌರವ ನೀಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಯೋಗ ಲೋಕಭವನಕ್ಕೆ( ರಾಜಭವನ) ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಈ ವೇಳೆ ಶಿವಕುಮಾರ್ ಮಾತನಾಡುವಾಗ ರಾಜಭವನ ಎಂದು ಹೇಳಿದಾಗ, ರಾಜ್ಯಪಾಲರಾದ ಗೆಹಲೋಟ್ ಅವರು ಈಗ ಇದು ಲೋಕಭವನ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, “ನೀವು ರಾಜ್ಯಪಾಲರು, ನಮ್ಮ ಪಾಲಿಗೆ ಇದು ರಾಜಭವನವೇ. ನಿಮ್ಮ ಹುದ್ದೆ ರಾಜ್ಯಪಾಲರೆಂದೇ ಇದೆ, ಅದನ್ನು ಬದಲಿಸಿಲ್ಲ. ನೀವು ರಾಜ್ಯಪಾಲ ಎಂಬ ಹೆಸರಿನಲ್ಲೇ ಸಹಿ ಹಾಕುತ್ತೀರಿ. ನಾವು ರಾಜಭವನಕ್ಕೆ ಗೌರವ ನೀಡುತ್ತೇವೆ. ರಾಜಭವನ ರಸ್ತೆಯ ಹೆಸರನ್ನು ನಾವು ಬದಲಿಸಿಲ್ಲ” ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.
ಮನರೇಗಾ ಕಾನೂನು ಮರುಸ್ಥಾಪಿಸಲು ಕೇಂದ್ರದ ಮೇಲೆ ಒತ್ತಡ ಹಾಕಿ:
“ಉದ್ಯೋಗ ಖಾತರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆಯನ್ನು ಹಿಂಪಡೆದು, ಮನರೇಗಾ ಕಾನೂನು ಮರುಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯಪಾಲರಿಗೆ ಮನವಿ ಮಾಡಿದರು.
“ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಹಿರಿಯ ನಾಯಕರು. ಅವರಿಗೆ ಗ್ರಾಮೀಣ ಪ್ರದೇಶಗಳ ಬಗ್ಗೆ ಅರಿವಿದೆ. ಅಂತಹವರು ಈ ಕಾಯ್ದೆ ಜಾರಿಗೆ ತರುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರ್ಕಾರ ಏಕಾಏಕಿ ಈ ಕಾಯ್ದೆ ಜಾರಿಗೆ ತಂದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ನೂತನ ಕಾಯ್ದೆ ಹಿಂಪಡೆದು ಮನರೇಗಾ ಮರುಜಾರಿಗೆ ತರಬೇಕು. ಈ ವಿಚಾರವಾಗಿ ಇಡೀ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯಗಳಿಗೆ ಹಾಗೂ ಪಂಚಾಯಿತಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನಿಮ್ಮ ಮೂಲಕ ಮನವಿ ಮಾಡಲಾಗುತ್ತಿದೆ. ನಾವು ಪಂಚಾಯಿತಿಗಳ ಅಧಿಕಾರ, ಸಂವಿಧಾನಿಕವಾಗಿ ನೀಡಲಾಗಿರುವ ಉದ್ಯೋಗ ಖಾತರಿ ಹಕ್ಕು ರಕ್ಷಣೆಗೆ, ಮಹಾತ್ಮಾ ಗಾಂಧಿ ಅವರ ಹೆಸರನ್ನು ಈ ಯೋಜನೆಯಲ್ಲಿ ಮುಂದುವರಿಸಬೇಕು ಎಂದು ನಾವು ಈ ಹೋರಾಟ ಮಾಡುತ್ತಿದ್ದೇವೆ” ಎಂದು ವಿವರಿಸಿದರು.

