Fri. Nov 1st, 2024

ರಾಮೇಶ್ವರ ಕೆಫೆಯಲ್ಲಿ ಸ್ಪೋಟ:ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ

Share this with Friends

ಮೈಸೂರು,ಮಾ.1: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದಿರುವ ಸ್ಪೋಟ ಘಟನೆಯ ತನಿಖೆ ಚುರುಕಾಗಿ ನಡೆಯುತ್ತಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಪ್ರಾಥಮಿಕ ತನಿಖೆಯ ಪ್ರಕಾರ ಅದು ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕ ಎಂದು ತಿಳಿದುಬಂದಿದೆ, ಪೂರ್ಣ ವರದಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ, ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಿಎಂ ತಿಳಿಸಿದರು.

ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿದ್ದೇನೆ ಎಂದು ‌ಹೇಳಿದರು.

ರಾಜ್ಯದಲ್ಲಿ ಇಂಥದ್ದು ನಡೆಯಬಾರದಿತ್ತು, ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನ: ಇಂಥ ಘಟನೆ ಸಂಭವಿಸಿದೆ, ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ವಿರೋಧ ಪಕ್ಷಗಳು ಇಂತಹ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಲ್ಲರೂ ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದರು.

ನೀತಿ ಆಯೋಗದವರು ನೀಡಿರುವ ವರದಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಬಡತನ ಶೇ 5ರಷ್ಟು ಮಾತ್ರ ಇದೆ ಎಂದು ಹೇಳಲಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ಅದನ್ನು ಪರಿಶೀಲಿಸಬೇಕಿದೆ,ಅವರು ಹೇಳಿರುವುದು ಸತ್ಯವೋ ಅಸತ್ಯವೋ ಎಂದು ತಿಳಿಯಬೇಕಿದೆ ಎಂದು ಸಿಎಂ ಉತ್ತರಿಸಿದರು

ಬಡತನ ಶೇ.5 ರಷ್ಟು ಕಡಿಮೆಯಾಗಿದ್ದರೆ ಅದು ಖುಷಿ ಪಡುವ ವಿಚಾರ,ಪರಿಸ್ಥಿತಿ ನೋಡಿದರೆ ಆ ರೀತಿ ಕಾಣುವುದಿಲ್ಲ,ಬಡತನ ರೇಖೆಗಿಂತ ಕೆಳಗಿರುವ 82 ಕೋಟಿ ಕುಟುಂಬಗಳಿಗೆ ಅಕ್ಕಿ ಕೊಡಲಾಗುತ್ತಿದೆ ಎಂದು ತಿಳಿಸಿದರು.


Share this with Friends

Related Post