Fri. Mar 6th, 2026

ಕ್ಷೀರಾಲಯ ಫಾರ್ಮ್ ಆರಂಭಿಸಿದ ಟೆಕ್ಕಿ ಕಪಲ್: ಆಧುನಿಕ ಕ್ಷೀರ ಕ್ರಾಂತಿಗೆ ಸುಧಾಕರ್ ಮೆಚ್ಚುಗೆ

Share this with Friends

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನ ಐಟಿ ಉದ್ಯೋಗಿಗಳಾದ ರಶ್ಮಿ ಹಾಗೂ ಪ್ರವೀಣ್ ದಂಪತಿ ಮಂಚೇನಹಳ್ಳಿ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದಲ್ಲಿ “ಕ್ಷೀರಾಲಯ” ಎಂಬ ಹಸು ಸಾಕಾಣಿಕೆ ಫಾರ್ಮ್ ಮೂಲಕ ಒಂದು ಆಧುನಿಕ ಕ್ಷೀರ ಕ್ರಾಂತಿಯನ್ನೇ ಮಾಡಲು ಹೊರಟಿದ್ದು,ಇವರ ಪ್ರಯತ್ನಕ್ಕೆ ಸಂಸದ ಡಾ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2024ರಲ್ಲಿ 2 ಎಕರೆ ಜಮೀನಿನಲ್ಲಿ 50 ಹಸುಗಳೊಂದಿಗೆ ಆರಂಭ ಮಾಡಲಾಗಿರುವ ಈ ಹಸು ಸಾಕಾಣಿಕೆ ಫಾರ್ಮ್ ಅತ್ಯಾಧುನಿಕ ಡೈರಿ ತಂತ್ರಜ್ಞಾನ, ಪಶು ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳನ್ನು ಅಳವಡಿಸಿಕೊಂಡಿರುವ ವಿನೂತನ ಪ್ರಯೋಗವಾಗಿದೆ. ಹಸು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಪೂರ್ವಿಕರ ಪರಂಪರೆಯನ್ನ ಮುಂದುವರೆಸಿಕೊಂಡು ಹೋಗಬೇಕು, ಹಸು ಸಾಕಾಣಿಕೆಯಲ್ಲಿ ಇಡೀ ರಾಜ್ಯದಲ್ಲೇ ಒಂದು ಮಾದರಿ ನಿರ್ಮಾಣ ಮಾಡಬೇಕು ಎಂಬ ಹಂಬಲ, ಮಹತ್ವಾಕಾಂಕ್ಷೆಯಿಂದ “ಕ್ಷೀರಾಲಯ” ಫಾರ್ಮ್ ಆರಂಭಿಸಿರುವ ರಶ್ಮಿ ಮತ್ತು ಪ್ರವೀಣ್ ದಂಪತಿ ಇದಕ್ಕಾಗಿ ಪುಣೆ ಸೇರಿದಂತೆ ಅನೇಕ ನಗರಗಳಲ್ಲಿ ಪ್ರವಾಸ, ಅಧ್ಯಯನ ಮಾಡಿ ಅದಕ್ಕೆ ಅಗತ್ಯವಾದ ಜ್ಞಾನವನ್ನೂ ಸಂಪಾದನೆ ಮಾಡಿದ್ದಾರೆ. ಇದನ್ನು ಇನ್ನೂ ವಿಸ್ತರಣೆ ಮಾಡಿ ಸುಮಾರು 13 ಎಕರೆಯಲ್ಲಿ 1,000 ಹಸುಗಳ ಬೃಹತ್ ಫಾರ್ಮ್ ಮಾಡಬೇಕು ಎಂಬ ಕನಸು ಕಟ್ಟಿಕೊಂಡು ಅತ್ಯಂತ ಆಸಕ್ತಿ, ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ.

ಕೈತುಂಬ ಸಂಬಳ ಕೊಡುವ ಐಟಿ ಉದ್ಯೋಗ ಇದ್ದರೂ, ನಗರದಲ್ಲೇ ನೆಮ್ಮದಿಯ, ಸುಖಕರ ಜೀವನ ನಡೆಸಬಹುದಾದ ಅವಕಾಶ ಇದ್ದರೂ, ಆ ಕಂಫರ್ಟ್ ಗೆ ಜೋತು ಬೀಳದೆ ತಮ್ಮ ಪ್ಯಾಷನ್ ಅನ್ನು ಅನುಸರಿಸಿ, ದೂರದ ದಂಡಿಗಾನಹಳ್ಳಿಯಲ್ಲಿ ಹಸು ಸಾಕಾಣಿಕೆ ಮಾಡುತ್ತಾ ಐದಾರು ಕುಟುಂಬಗಳಿಗೆ ಉದ್ಯೋಗವನ್ನೂ ಕಲ್ಪಿಸಿರುವ ರಶ್ಮಿ ಮತ್ತು ಪ್ರವೀಣ್ ದಂಪತಿಗಳಿಗೆ ಸಂಸದ ಸುಧಾಕರ್ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಿದರು.

ಡೈರಿ ಕ್ಷೇತ್ರದ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಹಾಲು, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ಸಲಹೆ ಮತ್ತು ಅನಿಸಿಕೆಗಳನ್ನು ಹಂಚಿಕೊಂಡು ಅವರ “ಕ್ಷೀರಾಲಯ” ಇನ್ನಷ್ಟು ರೈತರಿಗೆ, ಯುವ ಕೃಷಿಕರಿಗೆ ಸ್ಪೂರ್ತಿ ನೀಡಲಿ ಎಂದು ಆಶಿಸಿದರು.

 


Share this with Friends

Related Post