Fri. Mar 6th, 2026

ಕಾಂಗ್ರೆಸ್‌ ಸರ್ಕಾರದಿಂದ ರಾಜಭವನದ ಫೋನ್‌ ಟ್ಯಾಪ್‌: ಆರ್‌.ಅಶೋಕ ಗಂಭೀರ ಆರೋಪ

Share this with Friends

ಬೆಂಗಳೂರು:ಕಾಂಗ್ರೆಸ್‌ ಸರ್ಕಾರದಿಂದ ರಾಜಭವನದ ಫೋನ್‌ ಟ್ಯಾಪ್‌ ಮಾಡಲಾಗಿದೆ, ಕಾನೂನು ಸಚಿವರು ಹಾಗೂ ಐಟಿ ಸಚಿವರು ಫೋನ್‌ ಟ್ಯಾಪ್‌ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಫೋನ್‌ ಟ್ಯಾಪ್‌ ಮಾಡುವುದು ಅಪರಾಧವಾಗಿದ್ದು ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯಿಂದ ರಾಜಭವನಕ್ಕೆ ಫೋನ್‌ ಕರೆ ಬರುತ್ತದೆ, ಅದರಂತೆ ರಾಜ್ಯಪಾಲರು ನಡೆದುಕೊಳ್ಳುತ್ತಾರೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ. ಅಂದರೆ ರಾಜಭವನ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದರ್ಥ. ಇಲ್ಲವೆಂದರೆ ಈ ಎಲ್ಲ ವಿಷಯ ಸಚಿವರಿಗೆ ಹೇಗೆ ಗೊತ್ತಾಗುತ್ತದೆ? ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರ್‌ಎಸ್‌ಎಸ್‌ ಕಚೇರಿಯಿಂದ ರಾಜಭವನಕ್ಕೆ ಕರೆ ಬರುತ್ತದೆ ಎಂದು ಆರೋಪಿಸಿದ್ದಾರೆ. ಅಂದರೆ ಆರ್‌ಎಸ್‌ಎಸ್‌ ಕಚೇರಿಯ ಟೆಲಿಫೋನ್‌ ಕೂಡ ಟ್ಯಾಪ್‌ ಆಗುತ್ತಿದೆ ಎಂದರ್ಥ. ಇದು ಫೋನ್‌ ಟ್ಯಾಪಿಂಗ್‌ ಸರ್ಕಾರವೇ? ಎಂದು ಪ್ರಶ್ನಿಸಿದರು.

ನಮ್ಮ ಫೋನ್‌ ಕೂಡ ಟ್ಯಾಪ್‌ ಮಾಡಲಾಗುತ್ತಿದೆಯೇ? ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಇದ್ದಾಗ ಫೋನ್‌ ಟ್ಯಾಪಿಂಗ್‌ನಿಂದಲೇ ಸರ್ಕಾರ ಬಿದ್ದುಹೋಗಿತ್ತು. ಈ ಸರ್ಕಾರ ಕೂಡ ಫೋನ್‌ ಟ್ಯಾಪ್‌ ಮಾಡಿ ಬಿದ್ದುಹೋಗುತ್ತದೆ. ಈ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಕಾನೂನು ಸಚಿವರು ರಾಜ್ಯಪಾಲರ ಮೂಲಕವೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಅವರ ವಿರುದ್ಧವೇ ಮಾತನಾಡುತ್ತಾರೆ. ಸಚಿವರು ಗೌಪ್ಯತೆ ಕಾಪಾಡುವ ಕೆಲಸ ಮಾಡಬೇಕಿತ್ತು. ಇವರು ಕಾನೂನು ಸಚಿವರಾಗಿರುವುದೇ ನಮ್ಮ ಸದನಕ್ಕೆ ಅಗೌರವ. ಈ ಹಿಂದೆ ಅನಾಮಿಕ ವ್ಯಕ್ತಿಯೊಬ್ಬ ಸದನಕ್ಕೆ ಬಂದು ಕುಳಿತಿದ್ದ. ಕಾನೂನು ಸಚಿವರು ಅದನ್ನು ನೋಡಿಕೊಂಡು ಸುಮ್ಮನೆ ಕೂತಿದ್ದರು. ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸದನಕ್ಕೆ ಯಾರು ಬೇಕಾದರೂ ಬರಬಹುದೇ ಎಂದು ಪ್ರಶ್ನಿಸಿದರು.

ಪಟ್ಟಿ ಬಿಡುಗಡೆ ಮಾಡಿ:

ಬಳಿಕ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸಚಿವರು ಹಾಗೂ ಐಟಿ ಸಚಿವರು ಫೋನ್‌ ಟ್ಯಾಪ್‌ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಫೋನ್‌ ಟ್ಯಾಪ್‌ ಮಾಡುವುದು ಅಪರಾಧ. ಸಂವಿಧಾನದಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಫೋನ್‌ ಟ್ಯಾಪ್‌ ಮಾಡುತ್ತಾರೆ ಎಂದರೆ ಅದು ಸಂವಿಧಾನಕ್ಕೆ ಮಾಡುವ ಅಪಮಾನ. ಕಾನೂನು ಸಚಿವರು ಅಕ್ಷಮ್ಯ ಅಪರಾಧ ಮಾಡಿದ್ದು, ಈ ಕುರಿತು ಕ್ಷಮೆ ಕೋರಬೇಕು. ಈ ಕುರಿತು ಸಿಬಿಐ ತನಿಖೆಯಾಗಬೇಕಿದೆ. ರಾಜಭವನದಲ್ಲಿ ಏನು ನಡೆಯುತ್ತಿದೆ ಎಂಬ ಎಲ್ಲ ಮಾಹಿತಿ ಸರ್ಕಾರಕ್ಕೆ ಗೊತ್ತಾಗುತ್ತಿದೆ. ರಾಜಭವನಕ್ಕೆ ಕರೆ ಮಾಡಿದ ಕೇಂದ್ರದ ನಾಯಕರು ಹಾಗೂ ಆರ್‌ಎಸ್‌ಎಸ್‌ ನಾಯಕರ ಹೆಸರಿನ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.


Share this with Friends

Related Post