Fri. Mar 6th, 2026

ಆಡಳಿತದಲ್ಲಿ ಯತ್ರೀಂದ ಹಸ್ತಕ್ಷೇಪ ನೋಡಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಶಿವಮೊಗ್ಗ:ಆಡಳಿತದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು.ಯತೀಂದ್ರ ವಿಜಯೇಂದ್ರ ಆಡಳಿತ ವಿಚಾರದಲ್ಲಿ ಯಾವ ಹಸ್ತಕ್ಷೇಪ ಮಾಡುವುದನ್ನು ನಾನು ನೋಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ ಸರ್ಕಿಟ್ ಹೌಸ್ ನಲ್ಲಿ ಕೆ.ಜೆ. ಜಾರ್ಜ್ ಅವರು ಸಿಎಂ ಅವರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಆರೋಪ ಮಾಡಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಜಾರ್ಜ್ ಅವರು ಬಹಳ ಹಿರಿಯ ಮಂತ್ರಿಗಳು. ಸ್ವಾಭಿಮಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಯಾವ ಸಮಸ್ಯೆ ಕಂಡಿಲ್ಲ. ನಮಗೆ ಈ ವಿಚಾರ ಮಾಧ್ಯಮಗಳ ಮೂಲಕ ನನಗೆ ಈಗ ತಿಳಿಯಿತು. ವಿರೋಧ ಪಕ್ಷದವರು ಏನಾದರೂ ಹೇಳುತ್ತಿರುತ್ತಾರೆ. ಅವರು ಹೇಳುವುದೆಲ್ಲ ಸತ್ಯ ಎಂದು ತಿಳಿಯಲು ಆಗುವುದಿಲ್ಲ” ಎಂದು ತಿಳಿಸಿದರು.

ಯತೀಂದ್ರ ಅವರ ಹಸ್ತಕ್ಷೇಪ ವಿಚಾರವಾಗಿ ಕೇಳಿದಾಗ, “ಕಾರ್ಯಕರ್ತರು ಬಂದು ಮನವಿ ಕೊಟ್ಟಾಗ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡಿಕೊಂಡಿರುತ್ತಾರೆ. ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ನನ್ನ ಬಳಿ ಎಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಮನವಿ ನೀಡುತ್ತಾರೆ. ನಾನು ಎಲ್ಲಾ ಇಲಾಖೆ ಜೊತೆ ಮಾತನಾಡುತ್ತೇನೆ. ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಅವರು ಆಡಳಿತ ವಿಚಾರದಲ್ಲಿ ಯಾವ ಹಸ್ತಕ್ಷೇಪ ಮಾಡುವುದನ್ನು ನಾನು ನೋಡಿಲ್ಲ” ಎಂದರು.

ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಕೆ ಬಗ್ಗೆ ಕೇಳಿದಾಗ, “ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಲ್ಲ, ಯಾರೂ ಅರ್ಜಿ ಹಾಕಿಲ್ಲ. ಪಕ್ಷ ತೀರ್ಮಾನ ಮಾಡುತ್ತದೆ” ಎಂದರು.

ಗುತ್ತಿಗೆದಾರರ ಸಂಘದವರು ಏಳು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ಗುತ್ತಿಗೆದಾರ ಸಂಘದವರು ಏನು ಮಾತನಾಡಿದ್ದಾರೆ ಗೊತ್ತಿಲ್ಲ. ಅವರು ನನ್ನ ಬಳಿ ಬಂದು ಹೇಳಿಕೊಂಡ ಸಮಸ್ಯೆಗಳನ್ನು ನಾನು ಬಗೆಹರಿಸಿದ್ದೇನೆ” ಎಂದರು.

ಬೆಳಗಾವಿಯಲ್ಲಿ 400 ಕೋಟಿ ನಾಪತ್ತೆಯಾಗಿದ್ದು, ಇದು ಕಾಂಗ್ರೆಸ್ ಹಣ ಎಂಬ ಆರೋಪದ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳ ಕೈಯಲ್ಲೇ ಸಿಬಿಐ ಇದೆಯಲ್ಲಾ ತನಿಖೆ ಮಾಡಿಸಲಿ. ಯಾರ ಹಣ, ಯಾವ ಹಣ ನಮಗೆ ಈ ವಿಚಾರ ಗೊತ್ತಿಲ್ಲ. ತನಿಖೆ ಮಾಡಿ ಹೇಳಲಿ. ಸುಮ್ಮನೆ ಆರೋಪ ಮಾಡಿದರೆ ನಗೆಪಾಟಲಿಗೆ ಒಳಗಾಗಬೇಕಾಗುತ್ತದೆ” ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರವಾಗಿ ಕೇಳಿದಾಗ, “ನಾವು ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತೇವೆ. ನಾಳೆ ಅಥವಾ ನಾಡಿದ್ದು ಈ ಚುನಾವಣೆಗಳ ಮೀಸಲಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ನಾವು ಪಂಚಾಯ್ತಿ ನಾಯಕರಿಗೆ ಸಿದ್ಥತೆ ಮಾಡಿಕೊಳ್ಳಲು ಹೇಳಿದ್ದೇವೆ. ರಾಜ್ಯ ಚುನಾವಣಾ ಆಯೋಗ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮತಪತ್ರ ಬಳಸಲು ತೀರ್ಮಾನಿಸಿದ್ದಾರೆ. ಸಮಯ ನಿಗದಿಯಾಗಬೇಕು ಅಷ್ಟೇ. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ರಕ್ಷಣೆಗೆ ಪಂಚಾಯ್ತಿ, ಪಾಲಿಕೆಗಳ ಚುನಾವಣೆ ಮಾಡಲು ತೀರ್ಮಾನಿಸಿದ್ದೇವೆ” ಎಂದರು.

ನೀವು ಎಲ್ಲಾ ಕಾರ್ಯಕ್ರಮಕ್ಕೆ ಹೋದರೂ ನಿಮ್ಮ ಅಭಿಮಾನಿಗಳು ನೀವು ಸಿಎಂ ಆಗಬೇಕು ಎಂದು ಕೂಗುತ್ತಿದ್ದಾರೆ ಎಂದು ಕೇಳಿದಾಗ, “ಈಗ ಆ ವಿಚಾರ ಚರ್ಚೆ ಬೇಡ, ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದ್ದೇನೆ. ನಮಗೆ ಪಕ್ಷ ಯಾವ ಜವಾಬ್ದಾರಿ ನೀಡಿದೆಯೋ ನಾನು ಆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ” ಎಂದರು.

ಸಿಎಂ ಆಗಲು ನಿಮ್ಮ ಪ್ರಯತ್ನ ಎಂದು ಕೇಳಿದಾಗ, “ನಾವು ನಮ್ಮ ಕಾರ್ಯಕರ್ತರು ಶ್ರಮಿಸಿದ ಕಾರಣಕ್ಕೆ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾರ್ಯಕರ್ತರೇ ನಮ್ಮ ಆಧಾರಸ್ತಂಭ” ಎಂದು ತಿಳಿಸಿದರು.

ನಿಗಮ ಮಂಡಳಿ ಅಧಿಕಾರ ಮುಂದುವರಿಸುವ ಬಗ್ಗೆ ಕೇಳಿದಾಗ, “ಶಾಸಕರಿಗೆ ನೇಮಕ ಮಾಡುವಾಗ 2 ವರ್ಷ ಅಥವಾ ಮುಂದಿನ ಆದೇಶ ಬರುವವರೆಗೆ ಎಂದು ಆದೇಶ ಮಾಡಲಾಗಿತ್ತು. ಅದರಂತೆ ಮುಂದಿನ ಆದೇಶ ಬಂದಾಗ ನೋಡೋಣ” ಎಂದರು.


Share this with Friends

Related Post