Fri. Mar 6th, 2026

ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಐವಿಎಫ್ ಚಿಕಿತ್ಸೆ

Share this with Friends

ಬೆಂಗಳೂರು: ಐವಿಎಫ್ ನಂತಹ ಚಿಕಿತ್ಸಾ ಸೌಲಭ್ಯ ಕೈಗೆಟುಕದೆ ಸಂತಾನಹೀನತೆಯ ನೋವು ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಐವಿಎಫ್ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.

ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,ಮಗುವಿನ ಕನಸು ಕಾಣುತ್ತಿರುವ ಆರ್ಥಿಕವಾಗಿ ಹಿಂದುಳಿದ ದಂಪತಿಗಳಿಗೆ ಒಂದು ಸಿಹಿ ಸುದ್ದಿ. ಸಂತಾನಹೀನತೆಯ ನೋವು ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ದುಬಾರಿ ಚಿಕಿತ್ಸೆಗಳು ಎಟುಕುತ್ತಿರಲಿಲ್ಲ. ಈ ಅಂತರವನ್ನು ಹೋಗಲಾಡಿಸಲು ನಮ್ಮ ಸರ್ಕಾರವು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (AB PMJAY-CM’s ArK) ಯೋಜನೆಯಡಿ ಉಚಿತವಾಗಿ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಅಂದರೆ IVF ಮತ್ತು ICSI ಚಿಕಿತ್ಸೆಗಳನ್ನು ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಯಾವುದೇ ಜೈವಿಕ ಮಗುವನ್ನು ಹೊಂದಿರದ, ಕರ್ನಾಟಕದ ನಿವಾಸಿಗಳಾದ PHH ಕಾರ್ಡ್ ಹೊಂದಿರುವ ದಂಪತಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಯೋಮಿತಿ: ಮಹಿಳೆ ಮತ್ತು ಪುರುಷ ಇಬ್ಬರಿಗೂ 21 ರಿಂದ 55 ವರ್ಷದೊಳಗಿರಬೇಕು.

ಎಷ್ಟು ಬಾರಿ ಅವಕಾಶ?: ಒಬ್ಬ ಫಲಾನುಭವಿ ದಂಪತಿಗೆ ಜೀವಿತಾವಧಿಯಲ್ಲಿ ಗರಿಷ್ಠ 03 ಸೈಕಲ್‌ಗಳವರೆಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ.

ಚಿಕಿತ್ಸಾ ವೆಚ್ಚ: ಪ್ರತಿ ಸೈಕಲ್‌ಗೆ ₹1,20,000 ದಿಂದ ₹1,30,000 ವರೆಗಿನ ಚಿಕಿತ್ಸಾ ಪ್ಯಾಕೇಜ್ ಅನ್ನು ಸರ್ಕಾರವೇ ಭರಿಸಲಿದೆ.

ಎಲ್ಲಿ ಲಭ್ಯ?: ಸರ್ಕಾರದ ಆಯ್ದ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿರುತ್ತದೆ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 120 ಬಿಪಿಎಲ್ ಕಾರ್ಡ್ ದಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿದೆ.

ಸಂತಾನಹೀನತೆ ಎನ್ನುವುದು ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಪ್ರತಿ ದಂಪತಿಗಳ ಭಾವನಾತ್ಮಕ ಹೋರಾಟ. ಪ್ರತಿ ದಂಪತಿಗೂ ತಮ್ಮದೇ ಮಗು ಬೇಕು ಎಂಬ ಹಂಬಲವಿರುತ್ತದೆ, ಅದು ಅವರ ಹಕ್ಕು ಕೂಡ ಎಂಬ ಆಶಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ರಾಜ್ಯದ ಅರ್ಹ ಫಲಾನುಭವಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.


Share this with Friends

Related Post