ಬೆಂಗಳೂರು:ಡ್ರಗ್ಸ್ ಫ್ಯಾಕ್ಟರಿಯ ಒಳಗಡೆ ವಶಪಡಿಸಿಕೊಂಡ ಸಾಮಗ್ರಿಗಳ ಕುರಿತು ಸ್ವತಃ ಗೃಹ ಸಚಿವರೇ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಮೈಸೂರಿನ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು ಈ ದಾಳಿ ವೇಳೆ ಯಾವುದೇ ಅಕ್ರಮ ಪದಾರ್ಥ ಸಿಕ್ಕಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದು ಕೂಡಲೇ ರಾಜ್ಯ ಗೃಹ ಸಚಿವರು ರಾಜೀನಾಮೆ ನೀಡಬೇಕು,ಮೈಸೂರು ಪೊಲೀಸ್ ಕಮೀಷನರ್ ಅವರನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಗುಜರಾತ್ ಮತ್ತು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ನಿರ್ಮಾಣಗೊಂಡ ಡ್ರಗ್ಸ್ ಫ್ಯಾಕ್ಟರಿಯನ್ನು ಕಿತ್ತು ಹಾಕಿಸಿದ್ದ ಘಟನೆ ನಡೆದಿತ್ತು.ಇದರಮುಂದುವರೆದ ಭಾಗವಾಗಿ ಗುಜರಾತ್‍ನ ಆ್ಯಂಟಿ ಡ್ರಗ್ಸ್ ಬ್ಯುರೊವು ತನ್ನ ತನಿಖೆಯನ್ನು ಮುಂದುವರೆಸಿದ್ದ ಪರಿಣಾಮವಾಗಿ ನಿನ್ನೆ ಮತ್ತೆ ಮೈಸೂರಿನಲ್ಲಿ ಮತ್ತೊಂದು ಫ್ಯಾಕ್ಟರಿಗೆ ತೆರಳಿ ಅಲ್ಲಿನ ಮಾದಕವಸ್ತು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ; ಅಲ್ಲದೇ, ನಾಲ್ವರನ್ನು ಬಂಧಿಸಿದ್ದಾರೆಂದು ತಿಳಿದಿದೆ. ಸೂರತ್‍ನ ನಾರ್ಕೊಟಿಕ್ಸ್ ಕ್ರೈಂ ಬ್ಯುರೊವು ಈ ದಾಳಿಯನ್ನು ಈಗಾಗಲೇ ದೃಢಪಡಿಸಿದೆ. ಆದರೂ, ಪ್ರಸ್ತುತ ರಾಜ್ಯ ಸರಕಾರವು ಈ ಎಲ್ಲ ಘಟನಾವಳಿಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಡ್ರಗ್ಸ್ ಫ್ಯಾಕ್ಟರಿಯ ಒಳಗಡೆ ವಶಪಡಿಸಿಕೊಂಡ ಸಾಮಗ್ರಿಗಳ ಕುರಿತು ಸ್ವತಃ ಗೃಹ ಸಚಿವರೇ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಮೈಸೂರಿನ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು ಈ ದಾಳಿ ವೇಳೆ ಯಾವುದೇ ಅಕ್ರಮ ಪದಾರ್ಥ ಸಿಕ್ಕಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇವತ್ತು ಮೈಸೂರು ಗ್ರಾಮಾಂತರ ಪೊಲೀಸರು ಈ ತಥಾಕಥಿತ ವ್ಯಕ್ತಿಗಳ ಸಂಬಂಧಿಕರ ಮನೆಗೆ ದಾಳಿ ಮಾಡಿದಾಗ ಕೋಟಿಗಟ್ಟಲೆ ಬೆಲೆಬಾಳುವ ಮಾದಕವಸ್ತು ‘ಓಪಿಯಂ’ ಸಿಕ್ಕಿರುವುದು ಅತ್ಯಂತ ಕಳವಳಕಾರಿ ಸಂಗತಿ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕುಸಿತ, ಪದೇಪದೇ ಮಾದಕವಸ್ತು ದಂಧೆ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ರಾಜ್ಯ ಸರಕಾರ, ಒಬ್ಬ ಅಸಮರ್ಥ ಗೃಹ ಸಚಿವರು ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕ ಅದರಲ್ಲೂ ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರನ್ನು ಡ್ರಗ್ಸ್ (ಮಾದಕವಸ್ತು) ನಗರವಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ ಇದರ ನೈತಿಕ ಹೊಣೆ ಹೊತ್ತು ರಾಜ್ಯದ ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು; ಸುಳ್ಳು ಮಾಹಿತಿ ಕೊಟ್ಟ ಮೈಸೂರಿನ ಪೊಲೀಸ್ ಕಮೀಷನರ್ ಅವರನ್ನು ಅಮಾನತು ಮಾಡಬೇಕು. ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಒತ್ತಾಯಿಸಿದರು.

