Mon. Dec 23rd, 2024

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Rameshwaram Cafe Blast
Share this with Friends

ಬೆಂಗಳೂರು. ಮಾ. 2 : ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರು ನಗರದ ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲಾಗಿದ್ದು, ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ 9 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ನಿನ್ನೆ ಡಿಸ್ಚಾರ್ಜ್ ಆದರೆ ಕೆಲವರು ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ನಗರದ ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಹೆಚ್ಎಎಲ್ ಠಾಣೆಯಲ್ಲಿ ಎಫ್ಐಆರ್ :
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೆಚ್ ಎ ಎಲ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿವಿಧ ತನಿಖಾ ತಂಡಗಳು ಘಟನಾ ಸ್ಥಳಕ್ಕ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸಿಎಂ : ತುರ್ತು ಸಭೆ
ಇನ್ನು ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಶನಿವಾರ ತುರ್ತು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡಾ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಸ್ಫೋಟದ ರುವಾರಿಗಳು ಯಾರು ಎಂದ ಗೊತ್ತಾದ ಮೇಲೆ ತನಿಖೆಯನ್ನು ಯಾವ ಹಂತದಲ್ಲಿ ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಸದ್ಯಕ್ಕೆ ಘಟನೆಯ ಬಗ್ಗೆ ಮೇಲ್ನೋಟದ ಮಾಹಿತಿಗಳು ಮಾತ್ರ ಲಭ್ಯವಿದೆ. ಗಾಯಾಳುಗಳಿಗೆ ಪರಿಹಾರ ಕೊಡುವ ವಿಚಾರದಲ್ಲೂ ಪರಿಶೀಲನೆ ಮಾಡುತ್ತಿದ್ದೇವೆ‌ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈಗ ನಾನು ಹೇಳುತ್ತಿರುವುದು ಆರಂಭಿಕ ಹಂತದ ಮಾಹಿತಿ. ಯಾರು ಮಾಡಿದರು, ಯಾಕೆ ಮಾಡಿದರು ಎಂಬುದೆಲ್ಲಾ ಇನ್ನು ಸದ್ಯಕ್ಕೆ ವಿಚಾರಣೆಯ ಹಂತದಲ್ಲಿದೆ. ವ್ಯಕ್ತಿಯೊಬ್ಬ ಹೋಟೆಲ್ ನೊಳಗೆ ಟೋಕನ್ ಪಡದು ಬ್ಯಾಗ್ ಇಟ್ಟಿದ್ದಾನೆ‌. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಆರೋಪಿ ಪತ್ತೆಗೆ 10 ತನಿಖಾ ತಂಡ :
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಬೇರೆ ಬೇರೆ ರಾಜ್ಯಗಳಲ್ಲಿಯೂ ಆರೋಪಿ ಪತ್ತೆಗೆ ತನಿಖಾ ತಂಡ ಮುಂದಾಗಿದೆ. ಕೇರಳ, ತಮಿಳುನಾಡಿಗೆ ತನಿಖಾ ತಂಡಗಳು ತೆರಳಿವೆ.ಸ್ಟೋಟ ನಡೆದ ಹಿನ್ನೆಲೆ ಶುಕ್ರವಾರವೇ ಬೆಂಗಳೂರಿಗೆ ತಮಿಳುನಾಡಿನ ಪೊಲೀಸ್ ಟೀಂ ಬಂದಿದೆ, ರಾಮೇಶ್ವರಂ ಕೆಫೆ ಪ್ರಧಾನ ಶಾಖೆ ತಮಿಳುನಾಡಿನಲ್ಲಿರುವ ಹಿನ್ನೆಲೆಯಲ್ಲಿ ರಾಮೇಶ್ವರಂ ಕೆಫೆ ಆಡಳಿತ ಮಂಡಳಿ ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಬೆಂಗಳೂರಿಗೆ ತಮಿಳುನಾಡು ಪೊಲೀಸರು ಬಂದಿದ್ದರು.ಓರ್ವ DYSP ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸದ್ಯ ಆರೋಪಿ ಪತ್ತೆಗೆ ತನಿಖಾ ಟೀಂ ಮುಂದಾಗಿದೆ. ಸಿಸಿಬಿ ವಿಶೇಷ ತಂಡಗಳಿಂದ ತನಿಖೆ ನಡೆಸುತ್ತಿದೆ. ಹತ್ತು ತಂಡಗಳು ಆರೋಪಿ ಪತ್ತೆಗೆ ಬಲೆ ಬೀಸಿವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಕೈಗೊಳ್ಳಲಾಗಿದೆ. ಭದ್ರತಾ ಪಡೆ ಹಾಗೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಎರಡೂ ಟರ್ಮಿನಲ್ ಒಳಗಡೆ ಪ್ರವೇಶಿಸುವವರ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೆ ಕೂಡ ನಿಗಾ ವಹಿಸಲಾಗಿದೆ. ವಿಐಪಿ ಲೈನ್ ನಲ್ಲಿ ಪಾರ್ಕಿಂಗ್ ಅವಧಿಯನ್ನು ಅರ್ಧ ಗಂಟೆಯಿಂದ 5 ನಿಮಿಷಕ್ಕೆ ಇಳಿಸಲಾಗಿದೆ. ಅಲ್ಲದೇ, ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದ್ದು, ಮೂರು ಪಾಳಯದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.


Share this with Friends

Related Post