ಬೆಂಗಳೂರು: ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರತಂಡಕ್ಕೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವ ನಿರ್ಧಾರ ಪ್ರಕಟಿಸಿದೆ.
ಈ ಕುರಿತು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ನಟ ದುನಿಯಾ ವಿಜಯ್ ಮತ್ತು ಚಿತ್ರತಂಡ ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸುವಂತೆ ಆಹ್ವಾನ ನೀಡಿತ್ತು. ಆಹ್ವಾನ ಸ್ವೀಕರಿಸಿ ಸಿನಿಮಾ ವೀಕ್ಷಣೆ ಮಾಡಿದ್ದ ಸಿಎಂ, ಚಿತ್ರದ ಕಥಾಹಂದರವು ಶೋಷಿತರ ಪರವಾಗಿರುವುದು ಮತ್ತು ಜಾತಿ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವುದನ್ನು ಮೆಚ್ಚಿದ್ದರು., ಇದು ಇಂದಿನ ಸಮಾಜಕ್ಕೆ ಅತ್ಯಗತ್ಯವಾದ ಸಿನಿಮಾ ಎಂದು ಶ್ಲಾಘಿಸಿದ್ದರು.
ಈ ಚಿತ್ರವು 80ರ ದಶಕದ ಗ್ರಾಮೀಣ ಕರ್ನಾಟಕದ ಭೂ ಸಂಘರ್ಷ, ಜಮೀನ್ದಾರಿ ಪದ್ಧತಿ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ನಡೆಯುವ ಹೋರಾಟದ ಕಥೆಯನ್ನು ಹೊಂದಿದ್ದು, ಚಿತ್ರದ ಸಾಮಾಜಿಕ ಸಂದೇಶವನ್ನು ಗಮನಿಸಿ ಪ್ರತಿಯೊಬ್ಬರೂ ವೀಕ್ಷಿಸಬೇಕೆಂದು ಸಿಎಂ ಕರೆ ನೀಡಿದ್ದಾರೆ.
ಇದೀಗ ತೆರಿಗೆ ವಿನಾಯ್ತಿ ನೀಡಿವ ಮೂಲಕ ಚಿತ್ರತಂಡ ಮತ್ತು ವೀಕ್ಷಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆಯೂ ಇಂತಹ ಸಾಮಾಜಿಕ ಕಳಕಳಿಯ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಇದೀಗ ಲ್ಯಾಂಡ್ ಲಾರ್ಡ್ ಗೂ ಅದೇ ರೀತಿಯ ತೆರಿಗೆ ವಿನಾಯ್ತಿ ಸಿಕ್ಕಿದೆ.
‘ಲ್ಯಾಂಡ್ ಲಾರ್ಡ್’ ಚಿತ್ರವು ಜನವರಿ 23, 2026 ರಂದು ತೆರೆಕಂಡಿದ್ದು, ದುನಿಯಾ ವಿಜಯ್ ಅವರೊಂದಿಗೆ ರಾಜ್ ಬಿ. ಶೆಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

