Fri. Mar 6th, 2026

ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ವಿಧಾನಸಭೆ ನಿರ್ಣಯ: ಇದು ಸದನದ ನಿರ್ಣಯವಲ್ಲವೆಂದ ಅಶೋಕ್

Share this with Friends

ಬೆಂಗಳೂರು: ಕೇಂದ್ರ ಸರ್ಕಾರದ ವಿಬಿ-ಜಿ ರಾಮ್ ಜಿ (VB-G RAM G) ಕಾಯ್ದೆಯನ್ನು ವಿರೋಧಿಸಿ ಮತ್ತು ಮನರೇಗಾ (MGNREGA) ಯೋಜನೆಯನ್ನು ಹಳೆಯ ಮಾದರಿಯಲ್ಲೇ ಮರುಜಾರಿಗೊಳಿಸುವಂತೆ ಒತ್ತಾಯಿಸಿ ನಿಯಮಾವಳಿಗಳನ್ನು ಮೀರಿ ಕೇಂದ್ರ ಸರ್ಕಾರವನ್ನು ತೆಗಳುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದು ಸದನದ ನಿರ್ಣಯ ಅಲ್ಲ ಕಾಂಗ್ರೆಸ್ ನಿರ್ಣಯ ಎಂದು ಪ್ರತಿಪಕ್ಷನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಪ್ರಕಾರ ಎಲ್ಲರಿಗೂ ಏಳು ದಿನ ಮುನ್ನ ನೋಟಿಸ್‌ ನೀಡಬೇಕು ಆದರೆ ಇಲ್ಲಿ ನಿಯಮ ಪಾಲನೆ ಮಾಡಿಲ್ಲ ಅಲ್ಲದೆ ಮುಖ್ಯಮಂತ್ರಿಗಳು ದೌರ್ಜನ್ಯ ಮಾಡಿ, ಕೇಂದ್ರ ಸರ್ಕಾರವನ್ನು ಕೆಟ್ಟ ರೀತಿಯಲ್ಲಿ ಬೈದಿದ್ದಾರೆ. ಇದು ಸದನದ ನಿರ್ಣಯ ಎಂದು ಅವರು ಹೇಳಿದ್ದಾರೆ ಆದರೆ ಇದನ್ನು ಕಾಂಗ್ರೆಸ್‌ ಸರ್ಕಾರದ ನಿರ್ಣಯ, ರಾಹುಲ್‌ ಗಾಂಧಿಯ ನಿರ್ಣಯ ಎಂದು ಹೇಳಬೇಕು. ಅಧಿವೇಶನದಲ್ಲಿ ನಿಯಮಬಾಹಿರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದು ಅಸಮಧಾನ ಹೊರಹಾಕಿದರು.

ಮಾಜಿ ಸಿಎಂ ಎಸ್‌.ಎಂ.ಕೃಷ್ಣ ರಾಜ್ಯಕ್ಕೆ ವಿಮಾನ ನಿಲ್ದಾಣ, ಮೆಟ್ರೊ ತಂದರು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸಿದರು. ಇದನ್ನು ಮುತ್ಸದ್ಧಿತನ ಎನ್ನುತ್ತಾರೆ ಆದರೆ ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿ ಮಾತ್ರ ಬೇಕಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ನಾಯಕ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಲ್ಲಿ ಮಾತನಾಡಲು ಆಗಿಲ್ಲ. ಇಲ್ಲಿನ ಅಧಿವೇಶನದಲ್ಲಿ ಉತ್ತರನ ಪೌರುಷ ತೋರಿಸಿದ್ದಾರೆ. ಈ ನಿರ್ಣಯ ಸದನದ ನಿರ್ಣಯ ಅಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಎಂದಿಗೂ ಜಿಎಸ್‌ಟಿ ಸಭೆಗೆ ಹೋಗಿಲ್ಲ. ಪ್ರಧಾನಮಂತ್ರಿ ಕರೆದ ಸಭೆಗೆ ಹಾಜರಾಗಿಲ್ಲ. ಆದರೆ ಇಲ್ಲಿ ಬಂದು ಜಿಎಸ್‌ಟಿಯಲ್ಲಿ ಅನ್ಯಾಯವಾಗಿದೆ ಎನ್ನುತ್ತಾರೆ. ಅಬಕಾರಿ ಇಲಾಖೆಯ ಹಗರಣವನ್ನು ಮರೆಮಾಚಲು ಕೇಂದ್ರ ಸರ್ಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು, ಸೋನಿಯಾ ಗಾಂಧಿಯನ್ನು ಇಷ್ಟಪಡಿಸಲು ಹೀಗೆ ಮಾಡಿದ್ದಾರೆ. ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದರು.


Share this with Friends

Related Post