ಬೆಂಗಳೂರು:ಕ್ಯಾನ್ಸರ್ ಬಗ್ಗೆ ಭಯ ಬೇಡ, ನಿಯಮಿತವಾಗಿ ಪರೀಕ್ಷೆಗೆ ಒಳಗಾಗಿ ನಿಮ್ಮ ಮತ್ತು ಕುಟುಂಬದ ಸುರಕ್ಷತೆಗೆ ಮುಂದಾಗಿ. ಆರೋಗ್ಯವಂತ ಕರ್ನಾಟಕ ಕಟ್ಟುವ ನಮ್ಮೊಂದಿಗೆ ನೀವೂ ಪಾಲ್ಗೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಕನಕಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿಂದು ನೂತನವಾಗಿ ಆರಂಭಿಸಿರುವ ಕ್ಯಾನ್ಸರ್ ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ, ಮಾತನಾಡಿದ ಅವರು,ಕ್ಯಾನ್ಸರ್ ರೋಗಿಗಳ ಆರೈಕೆಗೆ ಮಣಿಪಾಲ್ ಸಂಸ್ಥೆ ಇರಿಸಿರುವ ಈ ಹೆಜ್ಜೆ ಉಪಯುಕ್ತಕಾರಿ ಮತ್ತು ಅಭಿನಂದನಾರ್ಹವಾದದ್ದು. ರಿಯಾಯಿತಿ ದರದಲ್ಲಿ ಈ ಸೇವೆಯನ್ನು ಒದಗಿಸಲಿ ಎಂದು ಹಾರೈಸಿದರು.
ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ “ಗೃಹ ಆರೋಗ್ಯ” ಯೋಜನೆಯಡಿ, ಕೇವಲ ಐದು ತಿಂಗಳ ಅವಧಿಯಲ್ಲಿ ರಾಜ್ಯದಾದ್ಯಂತ ಸುಮಾರು 35 ಲಕ್ಷಕ್ಕೂ ಅಧಿಕ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ, 72 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ಕ್ಯಾನ್ಸರ್ ಜಾಗೃತಿ ಮೂಡಿಸಿರುವುದು ಹೆಮ್ಮೆಯ ವಿಷಯ. ಬಾಯಿಯ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಸಾವಿರಾರು ಜನರಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಒದಗಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದರು.
ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡರೆ ಕ್ಯಾನ್ಸರ್ ಒಂದು ಗೆಲ್ಲಬಹುದಾದ ಸವಾಲು. ಈ ವರ್ಷ ನಮ್ಮ ಗುರಿ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿಯಾಗಿದ್ದು ನಿಯಮಿತ ತಪಾಸಣೆ ಮತ್ತು ಆರೋಗ್ಯಕರ ಜೀವನ ಶೈಲಿ ಮೂಲಕ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.
ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ಗೃಹ ಆರೋಗ್ಯ’ ಯೋಜನೆಯಡಿ ರಾಜ್ಯದ ಜನರ ಆರೋಗ್ಯ ರಕ್ಷಣೆಗಾಗಿ ಈಗಾಗಲೇ ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ 14 ಪ್ರಮುಖ ಕಾಯಿಲೆಗಳನ್ನು ಆರೋಗ್ಯ ಪ್ಯಾರಾಮೀಟರ್‌ಗಳ ಅಡಿಯಲ್ಲಿ ಉಚಿತವಾಗಿ ತಪಾಸಣೆ ನಡೆಸುತ್ತಿದ್ದೇವೆ. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಈ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿದೆ ಜೊತೆಗೆ ಜನರು ಕೂಡ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಇತರ ಅಂಶಗಳ ಬಗ್ಗೆಯೂ ನಾವು ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದರು.
ಕಳೆದ ವರ್ಷದಿಂದ ನಾವು ನಮ್ಮ ಬಹುತೇಕ ಆರೋಗ್ಯ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿದ್ದೇವೆ. ಅಲ್ಲಿ ಡೇ-ಕೇರ್ ಸೆಂಟರ್‌ಗಳು ಮತ್ತು ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರದ ಸಹಾಯವನ್ನೇ ನಂಬಿರುವ ಬಡ ನಾಗರಿಕರಿಗೂ ಕೂಡ ಅತ್ಯುತ್ತಮ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಸಿಗಬೇಕು ಎಂಬುದು ನಮ್ಮ ಆಶಯ ಎಂದರು.
ಈ ವೇಳೆ, ಮಣಿಪಾಲ್ ಆಸ್ಪತ್ರೆಯ ಡಾ. ಸುದರ್ಶನ್ ಬಲ್ಲಾಳ್ ಅವರು ಸೇರಿದಂತೆ ಆಸ್ಪತ್ರೆಯ ವೈದ್ಯರ ವೃಂದದೊಂದಿಗೆ ಕ್ಯಾನ್ಸರ್ ಚಿಕಿತ್ಸೆ ಕುರಿತು ಸಂವಾದ ನಡೆಸಿದರು.

