Fri. Mar 6th, 2026

ಮಹಾತ್ಮ ಗಾಂಧಿ ಅವರ ಹೆಸರನ್ನು ಮರಳಿ ತರುವ ತನಕ ಹೋರಾಟ: ಡಿಸಿಎಂ

Share this with Friends

ಬೆಂಗಳೂರು:ರೈತರ ವಿರುದ್ಧ ತಂದಿದ್ದ ಕರಾಳ ಕಾಯ್ದೆಗಳನ್ನು ಹಿಂಪಡೆಯುವ ತನಕ ಹೇಗೆ ಹೋರಾಟ ಮಾಡಲಾಯಿತೋ ಅದೇ ರೀತಿ ಮನರೇಗಾ ಬದಲಾವಣೆ ವಿರುದ್ಧ ಅದನ್ನು ಮರುಜಾರಿ ಮಾಡುವ ತನಕ ನಾವು ಹೋರಾಟ ಮಾಡುತ್ತೇವೆ. ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು,”ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ನೂತನ ಕಾಯ್ದೆ ಜಾರಿಗೆ ತರಲು ಆಗುವುದಿಲ್ಲ. ಶೇ. 60/40 ಅನುದಾನ ಹಂಚಿಕೆಗೆ ಒಪ್ಪಲು ಆಗುವುದಿಲ್ಲ. ಶೇ.40 ರಷ್ಟು ಅನುದಾನ ಯಾರು ನೀಡಲು ಆಗುತ್ತದೆ. ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ ಎಂದಾದರೆ ಬೇರೆಯವರ ಜಮೀನಿಗೆ ತೆರಳಿ ಕೆಲಸ ಮಾಡಲು ಸಾಧ್ಯವೇ?” ಎಂದರು.

“ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆ ಉದ್ಯೋಗ ಗ್ಯಾರಂಟಿ ನೀಡುತ್ತಿತ್ತು. ಪ್ರತಿಪಕ್ಷ ಬಿಜೆಪಿಗೆ ಕೇಂದ್ರ ಸರ್ಕಾರ ತಂದಿರುವ ಹೊಸ ಕಾನೂನು ಬಗ್ಗೆ ಚರ್ಚೆ‌ ಮಾಡಲು ಬೇಕಾದಷ್ಟು ಅವಕಾಶವಿತ್ತು. ಸದನದಲ್ಲಿ ಬಿಜೆಪಿಯವರಿಗೆ ಹೇಳಲು ಧೈರ್ಯವಿಲ್ಲ. ಹೊರಗೆಯಾದರೂ ಇದರ ಬಗ್ಗೆ ಮಾತನಾಡಲಿ ಎಂಬುದು ನನ್ನ ಅಪೇಕ್ಷೆ” ಎಂದು ವ್ಯಂಗ್ಯವಾಡಿದರು.

“ಕಾಂಗ್ರೆಸ್ ಪಕ್ಷ, ಸರ್ಕಾರ ಮಹಾತ್ಮ ಗಾಂಧಿ ಅವರ ಹೆಸರನ್ನು ಮರಳಿ ತರುವ ತನಕ ಹೋರಾಟ ಮುಂದುವರೆಸಲಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಕಟಿಸಿದರು..

ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಅಂಶ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಎಲ್ಲಿ ಪ್ರಸ್ತಾಪಿಸಲಾಗಿದೆ?:

ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡುವಾಗ ಮಾತನಾಡಿದ ಶಿವಕುಮಾರ್ ಅವರು, “ಉದ್ಯೋಗ ಖಾತರಿ ಯಾರಿಗಾಗಿ? ಈ ಯೋಜನೆ ನಿಂತಿರುವುದೇ ಗ್ರಾಮೀಣ ಭಾಗದ ಕಾರ್ಮಿಕರ ಸ್ವಾಭಿಮಾನದ ಬದುಕಿಗೆ ಆಧಾರವಾಗಿ ಈ ಯೋಜನೆ ರೂಪಿಸಬೇಕಾಗಿದೆ. ರೈತರು, ಕೃಷಿ ಕಾರ್ಮಿಕರು ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳುವುದಕ್ಕೆ ಈ ಯೋಜನೆ ಇರಬೇಕು. ಗುತ್ತಿಗೆದಾರನ ಕೈ ಕೆಳಗೆ ಹೋಗಿ ಕೆಲಸ ಮಾಡುವುದಕ್ಕೆ ಅಲ್ಲ. ಮನರೇಗಾ ಯೋಜನೆಯಲ್ಲಿ ತನ್ನ ಜಮೀನಿನಲ್ಲಿ ತೋಟಗಾರಿಕೆ ಬೆಳೆ, ಹೂ ಬೆಳೆ, ಸಾಕು ಪ್ರಾಣಿಗಳ ಕೊಟ್ಟಿಗೆ ನಿರ್ಮಾಣಕ್ಕೆ, ತನ್ನ ಜಮೀನು ಮಟ್ಟ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು, ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಅಂಶ ನೂತನ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಎಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿ” ಎಂದು ಆಗ್ರಹಿಸಿದರು.


Share this with Friends

Related Post