Fri. Mar 6th, 2026

ಸದನದಿಂದ ಸಿಟಿ ರವಿ ಅಮಾನತು: ಸಭಾಪತಿ ನಿರ್ಧಾರದ ವಿರುದ್ಧ ಬಿಜೆಪಿ ಅಸಮಧಾನ

Share this with Friends

ಬೆಂಗಳೂರು: ಬಿಜೆಪಿ ಸದಸ್ಯ ಸಿಟಿ ರವಿ ಅವರನ್ನು ಅಧಿವೇಶನದ ಅಂತಿಮ ದಿನದ ಮಟ್ಟಿಗೆ (ಒಂದು ದಿನ) ಸದನದಿಂದ ಅಮಾನತುಗೊಳಿಸಿದ ಸಭಾಪತಿ ಬಸವರಾಜ ಹೊರಟ್ಟಿ ನಿರ್ಧಾರಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದು, ಇದರ ಕಾನೂನು ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ರವರು ವಾಚಾಮಗೋಚರವಾಗಿ ಆರ್ .ಎಸ್.ಎಸ್.ನವರನ್ನು ಬೈದರು, ಮಹಿಳೆಯರನ್ನು ಕುರಿತು ಅವಾಚ್ಯವಾಗಿ ಬೈದರು.“ನಜೀರ್ ಅಹಮದ್ ರವರು ಪ್ರಧಾನಿಗಳನ್ನು ದೇಶದ್ರೋಹಿ” ಎಂದರು,  ಪ್ರಧಾನಿಗಳನ್ನು ನಿಂದಿಸಿದ್ದಕ್ಕೆ ಪ್ರತಿಯಾಗಿ ತಿರುಗೇಟು ನೀಡಿದ ಸಿಟಿ ರವಿ ದೇಶಪ್ರೇಮ ಇರುವವರು ಈ ಮಾತನ್ನು ಆಡುವುದಿಲ್ಲ, ಪಾಕಿಸ್ಥಾನಿ ನಾಲಿಗೆ ಇರುವವರು ಮಾತ್ರ ಈ ಮಾತನ್ನು ಆಡುತ್ತಾರೆ ಎಂದು ಯಾರ ಹೆಸರನ್ನೂ ಹೇಳದೇ ಮಾತನಾಡಿದ್ದಕ್ಕೆ, ಈ ಹೇಳಿಕೆಯು ಸದನದ ಘನತೆಗೆ ಕುಂದು ತಂದಿದೆ ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದರು.ಕೇವಲ ಮುಸ್ಲೀಂರ ಓಲೈಕೆ ಮಾಡಲಷ್ಟೇ ಇವರು ಈ ರೀತಿ ಪಟ್ಟು ಹಿಡಿದರು ಎಂದರು.

ಸಿಟಿ ರವಿ ಕ್ಷಮೆ ಯಾಚಿಸದೇ ಇದ್ದುದಕ್ಕೆ ಅವರನ್ನು ಒಂದು ದಿನದ ಮಟ್ಟಿಗಾದರೂ ಅಮಾನತ್ತು ಮಾಡಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯ ಮಾಡಿದ್ದಕ್ಕೆ ಮಣಿದ ಸಭಾಪತಿಗಳು ಅಧಿವೇಶನದ ಕಡೆಯ ದಿನದ ಮಟ್ಟಿಗೆ ಸಿಟಿ ರವಿ ಅವರನ್ನು ಸದನದಿಂದ ಅಮಾನತುಗೊಳಿಸಿ ಯಾವ ದ್ವಾರದಿಂದಲೂ ಅವರು ಸದನ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ಆದೇಶಿದರು ಇದನ್ನು ನಾವು ಖಂಡಿಸುತ್ತೇವೆ ಎಂದರು.

ಕ್ರಮಕ್ಕೂ ಮೊದಲು ಕಾಂಗ್ರೆಸ್ ಸದಸ್ಯರು ಒಂದು ಅರ್ಜಿ ಕೊಟ್ಟು ನೋಟಿಸ್ ಗೆ ಸಹಿ ಮಾಡಿ ಕೊಟ್ಟ ಮೇಲೆ ಸಭಾಪತಿಗಳು ಕ್ರಮ ಜರುಗಿಸಬೇಕು. ಯಾವ ನಿಯಮದ ಅಡಿಯಲ್ಲಿ ಕಾಂಗ್ರೆಸ್ ನವರು ಕ್ರಮಕ್ಕೆ ಕೇಳಿದ್ದು? ನಿಯಮ 326, 322 ರ ಅಡಿ ಕ್ರಮ ತೆಗೆದುಕೊಳ್ಳಬೇಕು. ಆ ನಿಯಮದ ಪ್ರಕಾರ ಸಿಟಿ ರವಿ ಯಾರ ಹೆಸರನ್ನೂ ಹೇಳಿಲ್ಲ. ಅದರಿಂದಾಗಿ ಮತ್ತು ಸಿಟಿ ರವಿ ಬಳಸಿದ ಪದ ಅಸಂವಿಧಾನಿಕ ಪದ ಆಗಿರಲಿಲ್ಲ. ಅವರು ಯಾರ ಹೆಸರನ್ನೂ ಹೇಳದ ಕಾರಣ ಇದು ನಿಯಮ ಉಲ್ಲಂಘನೆ ಆಗುವುದಿಲ್ಲ. ಆದರೂ ಸದನದ ಸಮಯ ವ್ಯರ್ಥ ಆಗಿದೆ, ಪೀಠಕ್ಕೆ ಮುಜಗರವಾಗಿದ್ದು ತಮ್ಮ ಅಧಿಕಾರವನ್ನು ಬಳಸಿ ಒಂದು ದಿನದ ಮಟ್ಟಿಗೆ ಅಮಾನತ್ತು ಮಾಡಿದ್ದೇನೆ ಎಂದು ಸಭಾಪತಿಗಳು ಹೇಳಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದರು.

ಸಭಾಪತಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಅವರು ಯಾವುದೇ ನಿರ್ಧಾರ ಮಾಡುವ ಮೊದಲು ಯೋಚಿಸಬೇಕಿತ್ತು, ಸಂಬಂಧಿಸಿದ ವ್ಯಕ್ತಿ ಇಲ್ಲದಿರುವಾಗ ಯಾವುದೇ ನಿರ್ಧಾರ ಪ್ರಕಟಿಸಬಾರದಿತ್ತು, ಆದರೂ ಪ್ರಕಟಿಸಿದ್ದಾರೆ, ಮುಂದೆ ಇದರ ಕಾನೂನು ಸಾಧಕ ಬಾಧಕಗಳನ್ನು ಪರಿಶೀಲಿಸಿ ಕ್ರಮವನ್ನು ನಿರ್ಧರಿಸುತ್ತೇವೆ ಎಂದರು.


Share this with Friends

Related Post