ಕೋಲಾರ: ಬರಪೀಡಿತ ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕೃಷ್ಣಾ ನದಿ ನೀರನ್ನು ಈ ಭಾಗಕ್ಕೆ ತರುವ ಕುರಿತು ಶೀಘ್ರದಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.
ಶನಿವಾರ ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಎತ್ತಿನಹೊಳೆ ಯೋಜನೆಯಿಂದ ನೀರು ಬರುವುದಿಲ್ಲ ಎಂದು ನಾನು ಅಂದೇ ಹೇಳಿದ್ದೆ. ಇಂದು ಅದರ ಯೋಜನಾ ವೆಚ್ಚ ₹30,000 ಕೋಟಿ ತಲುಪಿದ್ದರೂ ನೀರು ಬಂದಿಲ್ಲ. ಸರ್ಕಾರ ಜನರೊಂದಿಗೆ ಚೆಲ್ಲಾಟವಾಡುತ್ತಿದೆ,” ಎಂದು ಟೀಕಿಸಿದರು.
ನದಿ ನೀರು ನೀಡುವ ಭರವಸೆ ನೀಡಿ ಬೆಂಗಳೂರಿನ ರೊಚ್ಚು ನೀರನ್ನು (ತ್ಯಾಜ್ಯ ನೀರು) ಜಿಲ್ಲೆಗೆ ಹರಿಸಲಾಗುತ್ತಿದೆ. ಮೂರನೇ ಹಂತದ ಶುದ್ಧೀಕರಣಕ್ಕೂ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಈ ಭಾಗದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಂಧ್ರ ಸರ್ಕಾರದ ಸಹಕಾರ: ಸಂಸದ ಮಲ್ಲೇಶ್ ಬಾಬು ಅವರ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ ಅವರು, ಆಂಧ್ರದ ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಚಂದ್ರಬಾಬು ನಾಯ್ಡು ಅವರ ವಿಶ್ವಾಸ ಪಡೆದು ಕೃಷ್ಣಾ ನೀರು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರಮೇಶ್ ಕುಮಾರ್ ನೋಟಿಸ್ ವಿಚಾರ: ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ನೀಡಿರುವ ನೋಟಿಸ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. “ಬಿಡದಿಯಲ್ಲಿ ನನಗೆ ಸರ್ಕಾರ ಕಾಟ ಕೊಡುತ್ತಿದೆ, ಅದಕ್ಕೆ ರಮೇಶ್ ಕುಮಾರ್ ಕಾರಣ ಎನ್ನಲಾಗುತ್ತದೆಯೇ? ಕಾನೂನು ಹೋರಾಟವನ್ನು ಅವರೇ ಮಾಡಲಿ,” ಎಂದು ಟಾಂಗ್ ನೀಡಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ರಾಜ್ಯ ಸರ್ಕಾರ ಕೇವಲ ಕುರ್ಚಿ ಕಿತ್ತಾಟದಲ್ಲಿ ನಿರತವಾಗಿದೆ. ಕೇಂದ್ರ ಸಚಿವರಾಗಿರುವ ನಮ್ಮನ್ನು ರಾಜ್ಯದ ಕೆಲಸಗಳಿಗಾಗಿ ಸಿಎಂ ಅಥವಾ ಸಚಿವರು ಈವರೆಗೆ ಭೇಟಿ ಮಾಡಿಲ್ಲ. ಆದರೂ ನಾವು ಮಾವಿಗೆ ಬೆಂಬಲ ಬೆಲೆ ನೀಡುವ ಮೂಲಕ ರೈತರ ಹಿತರಕ್ಷಣೆ ಮಾಡಿದ್ದೇವೆ ಎಂದರು.
ಹೊಂದಾಣಿಕೆ:
ಮುಂಬರುವ ಚುನಾವಣೆಗಳ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕೆ ಸೀಟು ಹಂಚಿಕೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಸಮನ್ವಯದಿಂದ ಸ್ಥಳೀಯ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಮೇಲೆ ಗಮನ ಹರಿಸಿವೆ ಎಂದು ಸ್ಪಷ್ಟಪಡಿಸಿದರು.

