Fri. Mar 6th, 2026

ಅಶ್ವಿನಿ ವೈಷ್ಣವ್ ಎಂಬಿ ಪಾಟೀಲ್ ಭೇಟಿ:ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ

Share this with Friends

ಬೆಂಗಳೂರು: ರಾಜ್ಯ ರಾಜಧಾನಿಯಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಮತ್ತು ಬೆಂಗಳೂರು-ವಿಜಯಪುರ ನಡುವೆ ದಿನವಹಿ ವಿಶೇಷ ರೈಲುಗಳನ್ನು ಮಂಜೂರು ಮಾಡಬೇಕೆಂದು ಕೋರಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಶನಿವಾರ ಇಲ್ಲಿ ಖುದ್ದಾಗಿ ಮನವಿ ಸಲ್ಲಿಸಿದ್ದು,ಮೂರೂ ಮನವಿಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಬಾಗಲೂರಿನ ಹೈಟೆಕ್ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಬಳಿಕ ನಡೆದ ಈ ಮಹತ್ವದ ಭೇಟಿಯಲ್ಲಿ, ಎಂಬಿ ಪಾಟೀಲ್ ರಾಜ್ಯದ ರೈಲ್ವೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

ಮನವಿಯ ಮುಖ್ಯಾಂಶಗಳು:

ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್: ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವೆ ವಿಶ್ವದರ್ಜೆಯ ಸಂಪರ್ಕ ಕಲ್ಪಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ಪ್ರಸ್ತುತ ಘೋಷಣೆಯಾಗಿರುವ ಮುಂಬೈ-ಪುಣೆ ಹೈಸ್ಪೀಡ್ ರೈಲು ಯೋಜನೆಯನ್ನು ಬೆಂಗಳೂರಿನವರೆಗೆ ವಿಸ್ತರಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಬೆಂಗಳೂರು-ವಿಜಯಪುರ ವಂದೇ ಭಾರತ್: ಉತ್ತರ ಕರ್ನಾಟಕದ ಜನರ ದೀರ್ಘಕಾಲದ ಬೇಡಿಕೆಯಾದ ಬೆಂಗಳೂರು ಮತ್ತು ವಿಜಯಪುರ ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲನ್ನು ಮಂಜೂರು ಮಾಡಬೇಕು.

ಪ್ರಯಾಣದ ಅವಧಿ ಕಡಿತ: ಬೆಂಗಳೂರು-ವಿಜಯಪುರ ನಡುವಿನ ಪ್ರಯಾಣದ ಅವಧಿಯನ್ನು ಪ್ರಸ್ತುತದ 15-16 ಗಂಟೆಗಳಿಂದ 10 ಗಂಟೆಗೆ ಇಳಿಸಬೇಕು. ಇದಕ್ಕಾಗಿ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ದಿನನಿತ್ಯದ ವಿಶೇಷ ರೈಲು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವರ ಸ್ಪಂದನೆ:

ಸಚಿವ ಎಂ.ಬಿ. ಪಾಟೀಲ ಅವರ ಮನವಿಗಳನ್ನು ಆಲಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಎಲ್ಲಾ ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಈ ಯೋಜನೆಗಳು ಜಾರಿಯಾದಲ್ಲಿ ಮಧ್ಯ ಮತ್ತು ಉತ್ತರ ಕರ್ನಾಟಕದ ಕೈಗಾರಿಕಾ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂದು ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು

 

 


Share this with Friends

Related Post